ಮೂಡಿಗೆರೆ: ಬಣಕಲ್ ನಾಡ ಕಚೇರಿಯ ಆವರಣದಲ್ಲಿ ಪಿಂಚಣಿ ಹಾಗೂ ಕಂದಾಯ ಹಾಗೂ ಪೌತಿ ಖಾತಾ ಅದಾಲತ್…

386

ಬಣಕಲ್: ಗ್ರಾಮೀಣ ರೈತರ ಜಮೀನುಗಳಿಗೆ ಸಂಬಂಧಿಸಿದ ಪಹಣಿ ಲೋಪದೋಷ, ಖಾತೆ, ಪೌತಿ ಖಾತೆ ಬದಲಾವಣೆಗಳು ಸೇರಿದಂತೆ ಹಲವಾರು ಭೂಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುತ್ತಿರುವ ‘ಕಂದಾಯ ಅದಾಲತ್ ಆಂದೋಲನ’ ಮಾರ್ಚ್ 2021ರ ಅಂತ್ಯಕ್ಕೆ ಕೊನೆಗೊಳ್ಳುವುದರಿಂದ ರೈತರು ತಮ್ಮ ಭೂಸಮಸ್ಯೆಯನ್ನು ಸುಲಲಿತವಾಗಿ ಅದಾಲತ್‍ನಲ್ಲಿ ಪರಿಹರಿಸಿಕೊಳ್ಳಿ ಎಂದು ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಹೇಳಿದರು.
ಅವರು ಶನಿವಾರ ಬಣಕಲ್ ನಾಡ ಕಚೇರಿಯ ಆವರಣದಲ್ಲಿ ನಡೆದ ಪಿಂಚಣಿ ಅದಾಲತ್ ಮತ್ತು ಪೌತಿ ಖಾತಾ ಹಾಗೂ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 12,645 ಜನ ಬೆಳೆ ಪರಿಹಾರವನ್ನು ತೆಗೆದುಕೊಂಡಿಲ್ಲ. ಅದಕ್ಕೆ ಪೌತಿಯಾದವರ ಖಾತೆಯಲ್ಲಿ ಹೆಸರು ಬದಲಾಯಿಸದೇ ಇರುವುದೇ ಮೂಲ ಕಾರಣವಾಗಿದೆ. ಈ ಆಂದೋಲನದಲ್ಲಿ ಗ್ರಾಮಸ್ಥರು ತಮ್ಮ ಕುಟುಂಬದಲ್ಲಿ ಜಮೀನಿನ ಮಾಲಿಕ ಅಥವಾ ಕುಟುಂಬದ ಯಜಮಾನ ಮೃತಪಟ್ಟರೆ ಕೂಡಲೇ ಅವರ ನಂತರದ ವಾರಾಸುದಾರರಿಗೆ ಕಾನೂನು ಪ್ರಕಾರ ಹೆಸರು ಬದಲಾಯಿಸಿ ವಿವಿಧ ಸೌಲಭ್ಯ ಪಡೆಯಲು ಅವಕಾಶವಿದೆ. ರೈತರು ತಮ್ಮ ಜಮೀನಿನ ಪಹಣಿಯಲ್ಲಿ ಪೌತಿಯಾದವರ ಹೆಸರನ್ನು ತೆಗೆದು ಮುಂದಿನ ವಾರಾಸುದಾರರ ಹೆಸರು ನೋಂದಾಯಿಸಿ ಪಹಣಿಯಲ್ಲಿ ಹೆಸರು ಸರಿಪಡಿಸಬಹುದು. ಈ ಆಂದೋಲನದಲ್ಲಿ ಮರಣ ಪತ್ರ ಇದ್ದರೆ ಬಹಳ ಒಳಿತು. ಬಹಳ ಹಿಂದಿನ ವರ್ಷದಲ್ಲಿ ಕಾಲವಾಗಿದ್ದು ಮರಣ ದಾಖಲೆ ದೊರೆಯದಿದ್ದರೆ ಆ ಊರಿನ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಪಂಚಿನಾಮೆ ಮಾಡಿ ದಾಖಲೆ ನೀಡಿದರೆ ಅಂತಹ ಪಹಣಿಯಲ್ಲಿ ಹೆಸರನ್ನು ಸರಿಪಡಿಸಬಹುದು. ಪಿಂಚಣಿ ಅದಾಲತ್ ಪ್ರಕಾರ ಕಂದಾಯ ಇಲಾಖೆ ಮುಖಾಂತರ ಸರ್ಕಾರ ಈಚೆಗೆ ಉತ್ತಮ ಯೋಜನೆ ಮಾಡಿದೆ. ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ವೃದ್ದಾಪ್ಯ

ಯೋಜನೆಯನ್ನು ಯಾರೂ ಹೋಗಿ ನಾಡಕಚೇರಿ ಹೋಗಿ ಕೇಳುವ ಅವಶ್ಯಕತೆಯಿಲ್ಲ. ನವೋದಯ ಎಂಬ ಹೊಸ ಅ್ಯಪ್ ಹೊರ ತಂದಿದ್ದಾರೆ. ಕೇವಲ ಆಧಾರ್ ಕಾರ್ಡಿನ ವಯಸ್ಸನ್ನು ಆಧರಿಸಿ ಬ್ಯಾಂಕ್ ಖಾತೆ ದಾಖಲೆ ನೀಡಿ ಗ್ರಾಮ ಲೆಕ್ಕಿಗರು ಮನೆ ಬಾಗಿಲಿಗೆ ಬಂದು ನೋಂದಣಿ ಮಾಡುವ ಸೌಲಭ್ಯ ಮುಂದೆ ಸಿಗಲಿದೆ ಎಂದರು.
ಊರಿನ ಹಿರಿಯರಾದ ನಾಗೇಶ್‍ಗೌಡ ಮಾತನಾಡಿ,ಈ ಊರಿಗೆ ಉತ್ತಮ ನಾಡ ಕಚೇರಿ ಕಟ್ಟಡ ವ್ಯವಸ್ಥೆ ಮಾಡಿಕೊಡುವಂತೆ ವಿನಂತಿಸಿದರು. ಅದರ ಬಗ್ಗೆ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಮೂಡಿಗೆರೆ ತಹಸೀಲ್ದಾರ್ ಹೆಚ್.ಎಂ. ರಮೇಶ್ ಮಾತನಾಡಿದರು. ಸಂಧ್ಯಾ ಸುರಕ್ಷ, ವೃದ್ದಾಪ್ಯ ವೇತನ ಅರ್ಜಿ ಸಲ್ಲಿಸಿದವರಿಗೆ ಸ್ಥಳದಲ್ಲೇ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ರಾಜು, ಪಾಲಾಕ್ಷ, ರಾಜಸ್ವ ನಿರೀಕ್ಷಕ ಮಂಜುನಾಥ್, ವಿವಿಧ ಗ್ರಾ.ಪಂನ ಗ್ರಾಮ ಲೆಕ್ಕಿಗರಾದ ವಿನುತ, ಅನುಷಾ, ರಮ್ಯ, ಅನಿಶಾ, ನಮಿತ, ಆನಂದ್, ಗ್ರಾಮಸಹಾಯಕರಾದ ಅಣ್ಣಪ್ಪ, ಲಕ್ಷ್ಮಣ, ಸತೀಶ್, ನಾಗೇಶ್, ಸುರೇಶ್, ಚಂದ್ರು, ತೇಜಸ್ವಿ ಒಡನಾಡಿ ಸಿದ್ದರಗಿರಿ ಚಂದ್ರೇಗೌಡ, ಗ್ರಾಮಸ್ಥರಾದ ಎ.ಆರ್.ಲೋಬೊ, ನಾಗೇಶ್ ಗೌಡ, ಮಂಜುನಾಥ್‍ಗೌಡ ಹಾಗೂ ಬಣಕಲ್ ಹೋಬಳಿಯ ವಿವಿಧ ಗ್ರಾಮದ ಗ್ರಾಮಸ್ಥರು ಇದ್ದರು.