ಮೂಡಿಗೆರೆ : ಭಾರಿ ಮಳೆ ಹಾಗೂ ಭೂಮಿಯೊಳಗಿನ ವಿಚಿತ್ರ ಶಬ್ದಕ್ಕೆ ಭಯಭೀತರಾದ ಮಲೆನಾಡಿಗರು…

2697
firstsuddi

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಕಳಸ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಜೀವನದಿಗಳಾದ ಹೇಮಾವತಿ, ತುಂಗಾಭದ್ರಾ ನದಿಗಳು ಮೈತುಂಬಿ ಹರಿಯುತ್ತಿವೆ. ಮೂಡಿಗೆರೆ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೊಟ್ಟಿಗೆಹಾರ, ಆಲೇಖಾನ್ ಹೊರಟ್ಟಿ, ಮಲ್ಲೆಮನೆ, ದುರ್ಗದಹಳ್ಳಿ, ಬೈರಾಪುರ, ದಾರದಹಳ್ಳಿ ಸೇರಿದಂತೆ ತಾಲ್ಲೂಕಿನ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಸಣ್ಣ ಪುಟ್ಟ ನದಿಗಳೆಲ್ಲಾ ತುಂಬಿ ಹರಿಯುತ್ತಿದ್ದು, ಕಿತ್ತಲೆಗಂಡಿ ಸಮೀಪವಿರುವ ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೊಟ್ಟಿಗೆಹಾರ, ಜಾವಳಿ ಭಾಗದಲ್ಲಿ ಕಳೆದ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಹೇಮಾವತಿ ನದಿ ಪ್ರವಾಹದ ರೀತಿ ಹರಿಯುತ್ತಿದ್ದು, ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ನಾಟಿ ಮಾಡಿದ ಗದ್ದೆಗಳು ಕೂಡಾ ಜಲಾವೃತವಾಗಿದ್ದು, ಅಲ್ಲದೇ ಭೂಮಿಯ ಒಳಗಡೆ ವಿಚಿತ್ರ ಶಬ್ದ ಕೇಳಿಸುತ್ತಿದ್ದು, ಭೂಮಿ ಕಂಪಿಸಿದ ಅನುಭವ ಆಗಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ದುರ್ಗದಹಳ್ಳಿಯಲ್ಲಿ ಪದೇ ಪದೇ ಗುಡ್ಡ ಕುಸಿದು ರಸ್ತೆಗೆ ಬೀಳುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತವಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರಿಗೆ ಓಡಾಡಲು ಸಮಸ್ಯೆ ಎದುರಾಗಿದೆ. ವಿಚಿತ್ರ ಶಬ್ದದೊಂದಿಗೆ ಬಿರುಸಾಗಿ ಗಾಳಿ ಮಳೆ ಬರುತ್ತಿದ್ದು, ಮನೆಯಲ್ಲಿ ಇರುವುದಕ್ಕೆ ಹೆದರಿಕೆ ಆಗುತ್ತಿದೆ ಎಂದು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ದುರ್ಗದಹಳ್ಳಿ ಅಶ್ವಿನಿ ಹಾಗೂ ರಘು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.