ಮೂಡಿಗೆರೆ : ಮನಸ್ಸಿನ ಅಂತರಾಳದಿಂದ ಸ್ಥಳೀಯ ಶೈಲಿಯ ರಾಗದೊಂದಿಗೆ ಬಂದ ಪದಗಳ ಸಾಲುಗಳೇ ಜಾನಪದ ಹಾಡು : ಎಂ.ಎಸ್.ಅನಂತ್.

257
firstsuddi

ಮೂಡಿಗೆರೆ : ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಗ್ಗಿ ಕಾಲದಲ್ಲಿ ಜಾನಪದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತಾಲ್ಲೂಕು ಜಾನಪದ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಕ್ಕಿ ಮಂಜುನಾಥ್ ಹಾಗೂ ಸಂಗಡಿಗರು ಮತ್ತು ಶಾಲೆಯ ವಿದ್ಯಾರ್ಥಿಗಳು ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ ಎಂ.ಎಸ್.ಅನಂತ್ ಅವರು ಹಿಂದಿನ ಕಾಲದಲ್ಲಿ ಕಾರ್ಮಿಕ ವರ್ಗದವರು ತಮ್ಮ ದಿನನಿತ್ಯದ ಕಾಯಕದ ವೇಳೆ ತಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮನಸ್ಸಿನ ಅಂತರಾಳದಿಂದ ಸ್ಥಳೀಯ ಶೈಲಿಯ ರಾಗದೊಂದಿಗೆ ಬಂದ ಪದಗಳ ಸಾಲುಗಳೇ ಜಾನಪದ ಹಾಡು. ಇಂಥಹ ಜಾನಪದ ಹಾಡುಗಳಿಂದಲೇ ಅದೆಷ್ಟೋ ಜನರು ಖ್ಯಾತಿಯನ್ನು ಹೊಂದಿದ್ದಾರೆ. ಜಾನಪದವು ನಮ್ಮ ಭಾರತ ದೇಶದ ಅತ್ಯಂತ ಶ್ರೇಷ್ಟವಾದ ಕಲೆಯಾಗಿದೆ. ಜಾನಪದ ಪ್ರಾಕಾರಗಳಲ್ಲಿ ಮಾನವನ ಜೀವನ, ಸಂಸ್ಕೃತಿ, ಶೈಲಿ, ನಿರೂಪಣೆ ಸೇರಿದಂತೆ ಹಲವಾರು ಪ್ರಾಕಾರಗಳಲ್ಲಿ ಜೀವನಕ್ಕೆ ಅಗತ್ಯವಾದ ಎಲ್ಲಾ ನೈತಿಕ ಅಂಶಗಳನ್ನು ಒಳಗೊಂಡಿತ್ತು. ಆದರೆ ಇಂದಿನ ಮುಂದುವರೆದ ಆಧುನಿಕ ಮಾದ್ಯಮಗಳಿಂದಾಗಿ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿದ್ದು, ಟಿ.ವಿ, ಮೊಬೈಲ್ ಮುಂತಾದವುಗಳಿಂದ ಜಾನಪದ ಮಾದ್ಯಮ ಸಂಪೂರ್ಣವಾಗಿ ನಶಿಸಿಹೋಗುತ್ತಿದೆ ಎಂದರು.
ಆಕಾಶವಾಣಿ ಕಲಾವಿದ ಎಂ.ಎಸ್.ಆನಂದ್ ಅವರು ಮಾತನಾಡಿ, ಜಾನಪದ ಎಂದರೆ ನಮ್ಮ ದೇಶದ ನೈಜ ಸಂಪತ್ತಿನ ಅನಾವರಣ. ಯಾವುದೇ ವ್ಯಕ್ತಿಯಲ್ಲಿನ ಕಲೆಯನ್ನು ಅದು ಹೊರಹಾಕುವ ಕೆಲಸ ಮಾಡುತ್ತಿತ್ತು. ಇಂಥಹ ಕಲೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿ ಕಲೆಯನ್ನು ಬೆಳೆಸಬೇಕಾದ ಕರ್ತವ್ಯ ಶಿಕ್ಷಕರು ಹಾಗೂ ಪೋಷಕರ ಮೇಲಿದೆ. ಜಾನಪದ ರಾಗ ಅಥವಾ ಹಾಡುಗಳನ್ನು ಇಂದಿನ ಚಲನಚಿತ್ರಗಳಲ್ಲಿ ಬಳಸಿಕೊಳ್ಳುತ್ತಿದ್ದು, ಕಮರ್ಷಿಯಲ್ ದೃಷ್ಟಿಯಿಂದ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಆಕಾಶವಾಣಿ ಹಾಗೂ ದೂರದರ್ಶನಗಳನ್ನು ಹೊರತುಪಡಿಸಿದರೆ ಯಾವುದೇ ಖಾಸಗಿ ಮಾದ್ಯಮಗಳಲ್ಲಿ ಜನಪದ ಕಲೆಗೆ ಯಾವುದೇ ಮನ್ನಣೆ ಸಿಗದಿರುವದು ಆತಂಕಕಾರಿ ವಿಚಾರವಾಗಿದೆ ಎಂದರು.
ಜಾನಪದ ತಾಲ್ಲೂಕು ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಕಾರ್ಯದರ್ಶಿ ರವೀಂದ್ರ ಬಕ್ಕಿ, ಶಾಲೆಯ ಮುಖ್ಯ ಶಿಕ್ಷಕಿ ಆಶಲತಾ, ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್, ನೇಮಿರಾಜು, ಸೀತಮ್ಮ, ಶಶಿ, ಸುಂದರ್, ಕೋಮಲ, ಪ್ರಕಾಶ್ ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.