ಮೂಡಿಗೆರೆ : ಯಾವುದೇ ಒತ್ತಡಗಳಿಗೆ ಆಸ್ಪದ ನೀಡದೆ ಗ್ರಾಮದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಕೆಲಸ ಮಾಡಬೇಕು : ಇಂದಿರಾ.

244
firstsuddi

ಮೂಡಿಗೆರೆ : ಸರಕಾರದ ಅನುದಾನವನ್ನು ಬಳಸಿಕೊಂಡು ಮಾಡುವ ಕಾಮಗಾರಿಗಳನ್ನು ನಮ್ಮ ಮನೆಯ ಕಾಮಗಾರಿಯೆಂದು ತಿಳಿದುಕೊಂಡು ಮಾಡಿದರೆ ಅಲ್ಪ ಮೊತ್ತದಲ್ಲಿಯೂ ಉತ್ತಮ ದರ್ಜೆಯ ಉತ್ತಮ ಕಾಮಗಾರಿಯನ್ನು ಮಾಡಬಹುದು ಎಂದು ಮರಸಣಿಗೆ ಗ್ರಾಮ ಪಂಚಾಯತಿ ಮಾಡಿ ತೋರಿಸಿದೆ ಎಂದು ಮರಸಣಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಿಶ್ವನಾಥ್ ಅಭಿಪ್ರಾಯಪಟ್ಟರು.
ಕಳಸದ ಮರಸಣಿಗೆ ಗ್ರಾಮ ಪಂಚಾಯತಿಯ ನೂತನ ಕಛೇರಿ ಹಾಗೂ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ 18.25 ಲಕ್ಷ ವೆಚ್ಚದಲ್ಲಿ ಕಟ್ಟಡವನ್ನು ಮಾಡಲಾಗಿದೆ. ಅಧಿಕಾರ ಹಾಗೂ ಹುದ್ದೆ ಇಂದು ಬಂದು ನಾಳೆ ಹೋಗುತ್ತದೆ. ಆದರೆ ನಾವುಗಳು ಮಾಡಿದ ಕಾರ್ಯಗಳು ನಮ್ಮ ನೆನಪನ್ನು ಉಳಿಸಿ ಹೋಗುತ್ತವೆ. ಅದು ಒಳ್ಳೆಯದಿರಬಹುದು ಅಥವಾ ಕೆಟ್ಟದಿರಬಹುದು. ಆದುದರಿಂದ ಉತ್ತಮ ಕಾರ್ಯ ಮಾಡಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗ್ರಾ,ಪಂ ಅಧ್ಯಕ್ಷೆ ಇಂದಿರಾ ಅವರು, ಚುನಾಯಿತರಾಗಿ ಆಯ್ಕೆಯಾದ ಮೇಲೆ ಸಹಜವಾಗಿ ಒತ್ತಡ ಇರುತ್ತದೆ. ಯಾವುದೇ ಒತ್ತಡಗಳಿಗೆ ಆಸ್ಪದ ನೀಡದೆ ಗ್ರಾಮದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಕೆಲಸ ಮಾಡಬೇಕು ಆಗ ಮಾತ್ರ ಪರಿಪೂರ್ಣತೆಯಿಂದ ಕಾರ್ಯ ನೆರವೇರುತ್ತದೆ. ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರುಗಳಿಗೆ ಸಿಬ್ಬಂದಿವರ್ಗದವರಿಗೆ ನಾನು ಚಿರರುಣಿ ಎಂದು ವಂದನೆ ಸಲ್ಲಿಸಿದರು.
ಮತ್ತೋರ್ವ ಮಾಜಿ ಅಧ್ಯಕ್ಷ ಶ್ರೇಣಿಕ್ ಅವರು ಮಾತನಾಡಿ, ಎಲ್ಲರನ್ನೂ ನಿಭಾಯಿಸಿಕೊಂಡುಹೋಗುವ ಪಿಡಿಓಗಳು ಇದ್ದರೆ ಮಾತ್ರ ಇಮಥಹ ಕೆಲಸಗಳನ್ನು ಸುಲಲಿತವಾಗಿ ಮಾಡಲು ಸಾಧ್ಯ. ಎಲ್ಲಾ ಸದಸ್ಯರುಗಳು ಸಹ ತಮ್ಮ ರಾಜಕೀಯ ಮನೋಭಾವನೆಯನ್ನು ಬದಿಗೊತ್ತಿ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿದರೆ ಮಾತ್ರ ಗ್ರಾಮ ಪಂಚಾಯತಿಗಳು ಮುಮದುವರೆಯಲು ಸಾಧ್ಯ ಎಂದು ಹೇಳಿದರು.
ಸರಳ ಸಮಾರಂಭದಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ, ಗ್ರಾ.ಪಂ.ಮಾಜಿ ಅಧ್ಯಕ್ಷೆ ವೆಂಕಮ್ಮ ವಿಜಯಗೌಡ, ಸದಸ್ಯರುಗಳಾದ ಶಿಸಿಲಿಯಾ ಲಫಬೋ, ಶಕುಂತಲಾ, ವೆಲೆರಿಯನ್ ಡಿಸೋಜ, ಮಾಜಿ ಉಪಾಧ್ಯಕ್ಷರುಗಳಾದ ಅನಿಲ್, ಪದ್ಮರಾಜ್, ಪಿಡಿಓ ಸುಧೀರ್ ಇದ್ದರು.