ಮೂಡಿಗೆರೆ : ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಭೂ ಮಾಪನ ಇಲಾಖೆಯ ವಿರುದ್ಧ ಪ್ರತಿಭಟನೆ…

465
firstsuddi

ಮೂಡಿಗೆರೆ : ಇಂದು ಬೆಳಿಗ್ಗೆ 11ಗಂಟೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮೂಡಿಗೆರೆಯ ತಾಲ್ಲೂಕು ಕಛೇರಿಯಲ್ಲಿರುವ ಭೂಮಾಪನ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ರೈತ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಡಿ.ಆರ್. ದುಗ್ಗಪ್ಪಗೌಡ ಅವರು ಮಾತನಾಡಿ, ಪ್ರಸ್ತುತ ತಾಲ್ಲೂಕು ಕಛೇರಿಯಲ್ಲಿ ಇರುವ ಭೂ ಮಾಪನಾ ಇಲಾಖೆಯು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ತಾಲ್ಲೂಕಿನ ರೈತರು ತಮ್ಮ ಜಮೀನಿನ ಸರ್ವೇಗಾಗಿ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಾದು ಕುಳಿತರೂ ಕೂಡ ಭೂ ಮಾಪನಾ ಇಲಾಖೆಯ ಅಧಿಕಾರಿಗಳು ಯಾವುದೇ ಕೆಲಸವನ್ನು ಕೈಗೆತ್ತಿಗೊಳ್ಳದೆ ಸತಾಯಿಸುತ್ತಿದ್ದಾರೆ. ಸರ್ವೇ ಇಲಾಖೆಯಲ್ಲಿ ಲಂಚ ನೀಡದೇ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ ಎಂಬ ದೂರುಗಳು ಸಾಕಷ್ಟಿವೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಇಂಥಹ ನಡವಳಿಕೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಕೃಷಿ ಭೂಮಿಯನ್ನು ಗುರುತಿಕೊಳ್ಳಲು ಸಾಧ್ಯವಾಗದೆ ಸಾಗುವಳಿ ಮಾಡಲು ಕಷ್ಟಪಡುವಂತಾಗಿದೆ. ಈ ವಿಚಾರದ ಬಗ್ಗೆ ಹಲವು ಬಾರಿ ಮೂಡಿಗೆರೆ ತಹಶೀಲ್ದಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಸುಧಾರಣೆ ಕಂಡು ಬಂದಿರುವುದಿಲ್ಲ. ಭ್ರಷ್ಟಾಚಾರ, ಅಕ್ರಮ,ವಂಚನೆ, ಕಿರುಕುಳ ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಇಲಾಖಾವಾರು ಹೆಚ್ಚಿನ ಮಟ್ಟದಲ್ಲಿ ದೂರುಗಳು ಕೇಳಿಬರುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಕರ್ನಾಟಕ ಸರ್ಕಾರದ ರೆವೆನ್ಯೂ ಇಲಾಖೆಯ ಕಮೀಷನರ್ ಅವರಿಗೆ ಪತ್ರ ಬರೆದು ತಹಶೀಲ್ದಾರ್ ಅವರಿಗೆ ನೀಡಲಾಯಿತು ಎಂದು ತಿಳಿಸಿದರು.
ನಂತರ ಮಾತನಾಡಿದ ರಾಜ್ಯ ರೈತ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಸಿ ದಯಾಕರ್ ಅವರು ಮಾತನಾಡಿ, ಸರ್ವೇ ಇಲಾಖೆಯಲ್ಲಿ ಭೂ ಮಾಪಕರು ಹಾಗೂ ಕಛೇರಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕವಾಗಿ ಹಾಗೂ ಇಲಾಖಾವಾರು ಬಹಳ ದೂರುಗಳು ಕೇಳಿಬರುತ್ತಿವೆ. ಭೂ ಮಾಪಕರು ಜಮೀನುಗಳ ಅಳತೆ ಮತ್ತು ಕಛೇರಿಗೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಒಂದು ವೇಳೆ ಅಳತೆ ಕಾರ್ಯ ಮುಗಿಸಿದರೂ ಕೂಡ ಕಡತವನ್ನು ಮುಂದುವರೆಸಲು ಸತಾಯಿಸುತ್ತಿದ್ದಾರೆ. ಇದಿಷ್ಟೇ ಅಲ್ಲದೆ ನೊಂದಣಿ ಪೂರ್ವ ವಿಭಾಗ ಪತ್ರ, ಶುದ್ಧ ಕ್ರಯ ಪತ್ರ ಹಾಗೂ ಹದ್ದುಬಸ್ತ್, ಪಕ್ಕಾಪೋಡಿ ಕೋರಿ ಬರುವ ಅರ್ಜಿಗಳಲ್ಲಿ ಸಾವಿರಾರು ರೂಪಾಯಿಗಳ ಲಂಚವನ್ನು ಪಡೆಯುತ್ತಿದ್ದಾರೆ, ಹಲವು ರೈತರು ಹಾಗೂ ಸಾರ್ವಜನಿಕರು ನೋವು ತೋಡಿಕೊಳ್ಳುತಿದ್ದಾರೆ. ಇಂತಹ ಹಲವು ವಿಚಾರಗಳನ್ನು ಒಳಗೊಂಡಂತೆ ಪ್ರತಿಭಟನೆ ನಡೆಸಲಾಯಿತು ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ, ಯು.ಡಿ ಅಣ್ಣೇಗೌಡ, ಸಂಚಾಲಕ ಸವಿಂಜಯ ಜೈನ್ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ರೈತರುಗಳು ಸಾರ್ವಜನಿಕರು ಭಾಗವಹಿಸಿದ್ದರು.