ಮೂಡಿಗೆರೆ : ರೈತರು ಹಾಗೂ ಸಾರ್ವಜನಿಕರಿಗೆ ವಿತರಿಸಲು ಅರಣ್ಯ ಇಲಾಖೆಯಿಂದ 1.95 ಲಕ್ಷ ಗಿಡಗಳು ಸಿದ್ದ…

184
firstsuddi

ಕೊಟ್ಟಿಗೆಹಾರ ; ಮೂಡಿಗೆರ ತಾಲ್ಲೂಕಿನ ರೈತರು ಹಾಗೂ ಸಾರ್ವಜನಿಕರಿಗೆ ವಿತರಿಸಲು ಅರಣ್ಯ ಇಲಾಖೆಯಿಂದ ಸುಮಾರು 1.95 ಲಕ್ಷ ಗಿಡಗಳು ಸಿದ್ದವಾಗಿದ್ದು ಜೂನ್ 1 ರಿಂದ ಗಿಡಗಳ ವಿತರಣಾ ಕಾರ್ಯ ಪ್ರಾರಂಭವಾಗಲಿದೆ.
ಮೂಡಿಗೆರೆ ತಾಲ್ಲೂಕಿನ ಹಳೆಕೋಟೆ, ಅಂಗಡಿ, ಸಸ್ಯಕ್ಷೇತ್ರದಲ್ಲಿ ಬೀಟೆ, ನೇರಳೆ, ತಾರೆ, ಮಾಗನಿ, ಸಂಪಿಗೆ, ಬಿದಿರು, ಶ್ರೀಗಂಧ, ಬೈನೆ ಹಾಗೂ ಹಣ್ಣಿನ ಗಿಡಗಳಾದ ಹೆಬ್ಬಲಸು, ಮಾವು, ನೇರಳೆ, ನೆಲ್ಲಿ ಸೇರಿದಂತೆ ವಿವಿಧ ಗಿಡಗಳು ವಿತರಣೆಗ ಸಿದ್ದವಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ ಮಗುವಿಗೊಂದು ಮರ ಶಾಲೆಗೊಂದು ವನ ಯೋಜನೆಯಡಿ 2230 ಗಿಡಗಳನ್ನು ನೀಡಲಾಗುತ್ತದೆ. ಹಸಿರು ಕರ್ನಾಟಕ ಯೋಜನೆಯಡಿ ಗ್ರಾಮಗಳಿಗೆ ಮನೆಮನೆಗಳಿಗೆ ಗಿಡಗಳನ್ನು ನೀಡುವ ಯೋಜನೆ ಇದ್ದು ಈ ಯೋಜನೆಯಡಿ 19800 ಗಿಡಗಳನ್ನು ನೀಡಲಾಗುತ್ತದೆ. ಸಾರ್ವಜನಿಕರು ಹಾಗೂ ರೈತರಿಗಾಗಿ 78400 ಗಿಡಗಳು ಹಾಗೂ ಕಾವೇರಿ ಕೂಗು ಯೋಜನೆಯಡಿ ಕಾವೇರಿ ಪೂರಕವಾಗಿ ಕಾವೇರಿ ನದಿಯ ಉಪನದಿಗಳ ಪ್ರದೇಶಗಳಲ್ಲಿ 95 ಸಾವಿರ ಗಿಡಗಳನ್ನು ನೆಡಲು ನೀಡಲಾಗುತ್ತದೆ ಎಂದರು.
ರೈತರು ರೈತರ ಜಮೀನಿನಲ್ಲಿ ನೆಡುವ ಉದ್ದೇಶದಿಂದ ಸರ್ಕಾರ ರಿಯಾಯಿತಿ ದರದಲ್ಲಿ ನೀಡಲು ಮುಂದಾಗಿದೆ. ಆ ನಿಟ್ಟಿನಲ್ಲಿ 6 ಬೈ 9 ಬ್ಯಾಗಿಗೆ 1 ರೂ ಹಾಗೂ 8 ಬೈ 12 ಬ್ಯಾಗಿಗೆ 3 ರೂ ದರದಲ್ಲಿ ಗಿಡಗಳನ್ನು ರೈತರಿಗೆ ವಿತರಿಸಲಾಗುತ್ತದೆ. ರೈತರು ಸಸ್ಯಕ್ಷೇತ್ರದಲ್ಲಿರುವ ನೊಂದಾವಣಿ ಪುಸ್ತಕದಲ್ಲಿ ರೈತರ ಹೆಸರು, ಸರ್ವೇ ನಂಬರ್, ಗ್ರಾಮ, ಆರ್‍ಟಿಸಿ, ಮತ್ತು ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್‍ನ್ನು ನೀಡಿ ನೋಂದಾಯಿಸಿಕೊಳ್ಳಬೇಕು. 10 ರೂ ನೀಡಿ ರೈತರು ಹೆಸರು ಸಸ್ಯಕ್ಷೇತ್ರದಲ್ಲಿ ನೊಂದಾಯಿಸಿಕೊಂಡರೇ ರೈತರಿಗೆ ಪ್ರಥಮ ವರ್ಷದಲ್ಲಿ 35 ರೂ, ದ್ವಿತೀಯ ವರ್ಷದಲ್ಲಿ 40 ರೂ, ತೃತೀಯ ವರ್ಷದಲ್ಲಿ 50 ರೂ ನಂತೆ ಪ್ರತಿ ಗಿಡಕ್ಕೆ 125 ರೂ ನಂತೆ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ ಎಂದರು.
ಒಂದು ಹೆಕ್ಟೇರಿಗೆ 400 ಗಿಡಗಳನ್ನು ನೀಡಲಾಗುತ್ತದೆ. ಬೆಳೆ ಪರಿಹಾರ ಹಾಗೂ ಪ್ರಾಣಿಗಳಿಂದ ಹಾನಿಯಾದ ಪರಿಹಾರವಾಗಿ ತಾಲ್ಲೂಕಿಗೆ 75 ಸಾವಿರ ಪರಿಹಾರವನ್ನು ನೀಡಲಾಗಿದೆ. ನೆರೆಪೀಡಿತ ಪ್ರದೇಶಗಳ ರೈತರಿಗೆ ಭೂಸವಕಳಿ ಕಡಿಮೆ ಮಾಡುವ ಬೇರು ಮಣ್ಣಿನಾಳಕ್ಕೆ ಇಳಿದು ಮಣ್ಣಿನ ಸವಕಳಿ ತಡೆಯುವ ಬಿದಿರು, ಮುಂತಾದ ಗಿಡಗಳನ್ನು ಹೆಚ್ಚಾಗಿ ನೆಡಲು ರೈತರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಜೂನ್ ತಿಂಗಳಲ್ಲಿ ಚಾರ್ಮಾಡಿ ಘಾಟ್, ಚನ್ನಡ್ಲಿನ ನೆರೆಪೀಡಿತ ಪ್ರದೇಶಗಳಲ್ಲಿ ಮಣ್ಣಿನ ಸವಕಳಿ ತಡೆಯುವ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಲು ನಿರ್ದರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಮೋಹನ್, ಉಪವಲಯ ಅರಣ್ಯಾಧಿಕಾರಿ ರಮೇಶ್, ಚಿದಾನಂದ್, ಅರಣ್ಯ ರಕ್ಷಕ ರಮೇಶ್, ಸಸ್ಯಕ್ಷೇತ್ರದ ಪಾಲಕ ಚಂದ್ರಯ್ಯ ಚಾಲಕ ತಿಪ್ಪೇಶ್ ಮುಂತಾದವರು ಇದ್ದರು.