ಮೂಡಿಗೆರೆ : ಕಳಸದ ಭದ್ರಾನದಿ ತೀರದ ಪಂಚತೀರ್ಥಗಳಲ್ಲಿ ಒಂದಾದ ವಿಶಿಷ್ಟ ತೀರ್ಥದ ಬಳಿ ಮಲೆನಾಡಿನ ಭಾಗದ ಅಪರೂಪವಾದ ‘ವೀರ ಮಹಾಸತಿ ಗುಡಿ’ಯನ್ನು ಖ್ಯಾತ ಇತಿಹಾಸ ಸಂಶೋಧಕ ಹೆಚ್.ಆರ್.ಪಾಂಡುರಂಗ ಅವರು ಪತ್ತೆ ಹಚ್ಚಿದ್ದಾರೆ.
ಅರಣ್ಯ ಇಲಾಖೆಯ ನರ್ಸರಿ ಪಕ್ಕದಲ್ಲಿ ಇರುವ ನಾಲ್ಕು ಅಡಿ ಎತ್ತರದ ಕಣಶಿಲೆಯ ಕಲ್ಲಿನಲ್ಲಿ ಕೆತ್ತಿರುವ ಮಹಾಸತಿ ಶಿಲ್ಪವಿದ್ದು, ವೀರ ಮಹಾಸತಿಯರ ಕುತ್ತಿಗೆಯವರೆಗೆ ಹಾವುಗಳು ಸುತ್ತಿಕೊಂಡಿರುವ ಕೆತ್ತನೆಯ ಶಿಲ್ಪ ಇದಾಗಿದೆ. ಈ ಶಿಲಾ ಮೂರ್ತಿಯು ಎರಡು ಫಲಕಗಳನ್ನು ಹೊಂದಿದ್ದು, ಕೆಳಗಿನ ಫಲಕದಲ್ಲಿ ವೀರನ ಶಿಲ್ಪ ಖಡ್ಗಧಾರಿಯಾಗಿದೆ. ವೀರನು ಧರಿಸಿದ ಶಿರೋಭೂಷಣ, ಕರ್ಣಕುಂಡಲ ಅತ್ಯಾಕರ್ಷಕವಾಗಿದೆ. ಬಲಭಾಗದಲ್ಲಿ ವೀರನ ಪತ್ನಿ ಮಹಾಸತಿಯ ಶಿಲ್ಪವು ಅತ್ಯಾಕರ್ಷಕ ಕೇಶಾಲಂಕಾರವನ್ನು ಹೊಂದಿದ್ದು, ಕರ್ಣಕುಂಡಳ ಧಾರಣೆ, ಮೇಲಕ್ಕೆ ಎತ್ತಿದ ಕೈಗಳಲ್ಲಿ ಕನ್ನಡಿ ಹಾಗೂ ನಿಂಬೆಹಣ್ಣು ಹಿಡಿದ ಶೈಲಿಯಲ್ಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸ್ಮಾರಕದ ಮೇಲಿನ ಫಲಕದ ಎಡಭಾಗದಲ್ಲಿ ಶಿವಲಿಂಗ, ಶಿವಲಿಂಗದ ಮುಂದೆ ಮಂಡಿಯೂರಿ ಕುಳಿತಿರುವ ಅಲಂಕಾರಯುಕ್ತವಾಗಿ ಕುಳಿತ ಶಿವನ ವಾಹನ ನಂದಿ, ಘಂಟಾನಾದದೊಂದಿಗೆ ಶಿವನಿಗೆ ಪೂಜೆ ಸಲ್ಲಿಸುತ್ತಿರುವ ಅರ್ಚಕರುಗಳು, ಅವರ ಪಕ್ಕದಲ್ಲಿ ದೀಪದ ಕಂಬ, ಶಿವಲಿಂಗದ ಎಡಭಾಗದಲ್ಲಿ ಸೂರ್ಯ, ಬಲಭಾಗದಲ್ಲಿ ಚಂದ್ರನ ಚಿತ್ರಣಗಳನ್ನು ಕೆತ್ತಲಾಗಿದೆ. ಇದು ವೀರ ಹಾಗೂ ಮಹಾಸತಿಯರು ಕೈಲಾಸ ವಾಸಿಗಳಾಗಿದ್ದಾರೆ ಎನ್ನುವ ಸಂದೇಶ ಇದೆ ಎಂದು ಅರ್ಥೈಸಬಹುದು ಎಂಬುವು ಸಂಶೋಧಕರ ಅಭಿಪ್ರಾಯವಾಗಿದೆ.
ಈ ಸ್ಮಾರಕದಲ್ಲಿರುವ ವೀರ ಮಹಾಸತಿಯರ ಶಿರೋಭೂಷಣ ಕೇಶಾಲಂಕಾರ, ಅವರುಗಳು ನಿಂತಿರುವ ಶೈಲಿಗಳನ್ನು ಗಮನಿಸಿದರೆ ಇದರಲ್ಲಿರುವ ವೀರನು ಕಳಸ ಹಾಗೂ ಸುತ್ತಮುತ್ತಲಿನ ಪ್ರದೇಶದ ರಾಜಕುಟುಂಬಸ್ಥನೋ, ಸೇನಾಧಿಪತಿಯೋ ಅಗಿದ್ದು ಕಾಲಂತರದ ಯುದದಲ್ಲಿ ವೀರ ಮರಣ ಹೊಂದಿದ್ದಾನೆ ಹಾಗೂ ಈ ಸಂದರ್ಭದಲ್ಲಿ ಆತನ ಪತ್ನಿ ಸತಿಸಹಗಮನ ಮಾಡಿರಬಹುದು. ಅವರ ಸ್ಮರಣಾರ್ಥವಾಗಿ ಈ ಶಿಲ್ಪವನ್ನು ಕೆತ್ತನೆ ಮಾಡಿ ಸ್ಥಾಪನೆ ಮಾಡಿ, ಅದಕ್ಕೆ ಶಿಲಾ ಮಂಟಪವನ್ನು ನಿರ್ಮಿಸಿ ನಿತ್ಯ ಪೂಜಾ ಕೈಂಕರ್ಯಗಳನ್ನು ಮಾಡಿರಬಹುದು. ಕಾಲಮಾನದ ದೃಷ್ಟಿಯಿಂದ ಹೇಳುವುದಾದರೆ ಈ ಶಿಲ್ಪವು ಸುಮಾರು ಹದಿನಾಲ್ಕನೇ ಶತಮಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಭೈರವ ಅರಸರ ಆಡಳಿತದ ಹಾಗೂ ವಿಜಯನಗರ ಸಾಮ್ರಾಜ್ಯದ ಆರಂಭದ ಕಾಲಕ್ಕೆ ಸೇರಿರಬಹುದು ಎಂದು ಊಹಿಸಬಹುದು ಎಂಬುವುದು ಸಂಶೋಧಕ ಹೆಚ್.ಆರ್.ಪಾಂಡುರಂಗ ಅವರ ಅಭಿಪ್ರಾಯವಾಗಿದೆ.
ಈ ವೀರ ಮಹಾಸತಿ ಶಿಲ್ಪವನ್ನು ಸ್ಥಳೀಯರು ‘ಮಾಸ್ತಿಯಮ್ಮ’ ಎಂದೂ ಈ ಸ್ಥಳವನ್ನು ‘ಮಾಸ್ತಿಕಟ್ಟೆ ’ ಎಂತಲೂ ಕರೆಯುತ್ತಾರೆ. ಅಪರೂಪದ ಇಂಥಹ ಹಲವು ಶಿಲ್ಪ ಕಲಾಕೃತಿಗಳು ಕಳಸದ ಭಾಗದಲ್ಲಿ ಪತ್ತೆಯಾಗುತ್ತಿದ್ದು ಸರ್ಕಾರ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸ್ಥಳೀಯ ಪ್ರವಾಸೋದ್ಯಮ ಹಾಗೂ ಸಂಸ್ಕøತಿಯ ಅನಾವರಣ ಮಾಡಬೇಕು ಎಂಬುವುದು ಸ್ಥಳೀಯರ ಒತ್ತಾಯವಾಗಿದೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ವಿಜಯನಗರ ಕಾಲದ ಅಪರೂಪವಾದ ‘ವೀರ ಮಹಾಸತಿ ಗುಡಿ’ಯನ್ನು ಪತ್ತೆ ಹಚ್ಚಿದ ಇತಿಹಾಸ ಸಂಶೋಧಕ…










