ಮೂಡಿಗೆರೆ : ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಮೊಬೈಲ್ ಬಳಕೆಯಿಂದ ದೂರವಿರುವುದು ಅವಶ್ಯ : ಎಎಸ್‍ಐ ಸಣ್ಣತಿಮ್ಮಪ್ಪ.

1072
firstsuddi

ಬಣಕಲ್ : ಪ್ರಸ್ತುತ ದಿನದಲ್ಲಿ ಶೇ 90 ರಷ್ಟು ಅಪರಾಧಗಳು ಮೊಬೈಲ್ ಬಳಕೆಯಿಂದಲೇ ಆಗುತ್ತಿದ್ದು ಆದ್ದರಿಂದ ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಮೊಬೈಲ್ ಬಳಕೆಯಿಂದ ದೂರವಿರುವುದು ಅವಶ್ಯ ಎಂದು ಬಣಕಲ್ ಠಾಣೆಯ ಎಎಸ್‍ಐ ಸಣ್ಣತಿಮ್ಮಪ್ಪ ಹೇಳಿದರು.
ಬಣಕಲ್‍ನ ನಜರೆತ್ ಶಾಲೆಯಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ಅತ್ಯಮೂಲ್ಯವಾಗಿದ್ದು ಇದನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬಾರದು. ತುಂಬಾ ಜಾಗೃತಿಯಿಂದ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ನಿಮ್ಮ ತಂದೆ ತಾಯಿ ಕನಸನ್ನು ಸಾಕಾರಗೊಳಿಸಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಿ ಉಜ್ವಲ ಭವಿಷ್ಯವನ್ನು ಕಂಡುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಶಾಲಾ ವಾಹನ ಮಾಲೀಕರು ಹಾಗೂ ಚಾಲಕರ ಸಭೆಯನ್ನು ಕರೆದು ಸುರಕ್ಷಿತ ಪ್ರಯಾಣದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೋ ಮಾತನಾಡಿ ಅಪರಾಧಗಳು ಕಡಿಮೆಯಾಗಲು ಬಾಲ್ಯದಿಂದಲೆ ಮಕ್ಕಳಿಗೆ ತಿಳುವಳಿಕೆ ಹೇಳಬೇಕು. ಜೊತೆಗೆ ಜೀವನಮೌಲ್ಯಗಳನ್ನು ತಿಳಿಸಿಕೊಡುವುದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಿ ಅಪರಾಧಗಳನ್ನು ಕಡಿಮೆಗೊಳಿಸಬಹುದು ಎಂದರು.
ಈ ಸಂದರ್ಭದಲ್ಲಿ ಸಹ್ಯಾದ್ರಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ಮಂಜುನಾಥ್, ಉಪಾಧ್ಯಕ್ಷರಾದ ಆಲ್ವಿನ್ ರೋಡ್ರಿಗಸ್, ಪೋಲಿಸ್ ಠಾಣೆ ಸಿಬ್ಬಂದಿಗಳಾದ ಬಾಬು, ಲಕ್ಷ್ಮಣ್, ಕವಿತಾ, ನಜರೆತ್ ಶಾಲೆಯ ಸಿಸ್ಟರ್ ದೀಪ್ತಿ, ಸಿಬ್ಬಂದಿಗಳಾದ ಲವಕುಮಾರ್, ಪ್ರಕಾಶ್, ದೈಹಿಕ ಶಿಕ್ಷಕ ಪುರಂದರ ಖಾರ್ವಿ, ಹಾಗೂ ಸಹಶಿಕ್ಷಕರು ಇದ್ದರು.