- ವರದಿ : ಸುಧೀರ್ ಮೊದಲಮನೆ
ಮೂಡಿಗೆರೆ : ಪಟ್ಟಣದ ಹ್ಯಾಂಡ್ ಪೋಸ್ಟ್ ವೃತ್ತದ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಸ್ಥಳೀಯರು ಮತ್ತು ಪ್ರಯಾಣಿಕರಿಂದ ತೀವ್ರ ಆಕ್ಷೇಪ ಎದುರಾಗಿದ್ದು ಕೂಡಲೇ ಕೆಲಸ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.
ಹ್ಯಾಂಡ್ ಪೋಸ್ಟ್ ಸರ್ಕಲ್ ನಿರ್ಮಾಣದ ಹಂತದಲ್ಲಿ ಆಗಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೊದಲೇ ಜಿಲ್ಲಾ ಪಂಚಾಯತಿ ಹ್ಯಾಂಡ್ಪೋಸ್ಟ್ ವೃತ್ತದ ಪಕ್ಕದಲ್ಲಿಯೇ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿರುವುದು ಮತ್ತೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಮಂಗಳೂರು ವಿಲ್ಲುಪುರಂ ರಾ.ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಾರಂಭವಾದ ನಂತರ ರಸ್ತೆಯನ್ನು ಅಳತೆ ಮಾಡಿ ರಸ್ತೆ ಪಕ್ಕದ ಜಾಗಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಈಗಿರುವ ನಿಯಮಗಳ ಪ್ರಕಾರ ರಸ್ತೆಯ ಮಧ್ಯ ಭಾಗದಿಂದ ರಸ್ತೆಯ ಎರಡೂ ಭಾಗಗಳಲ್ಲಿ 120 ಅಡಿಗಳಷ್ಟು ಜಾಗವನ್ನು ಬಿಟ್ಟು ಹೊಸ ಕಾಮಗಾರಿ ಅಥವಾ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿ ನಿಯಮಾವಳಿಗಳಿಗೆ ಒಳಪಟ್ಟು ಅನುಮತಿ ಪಡೆಯಬೇಕು. ಆದರೆ ಪ್ರಯಾಣಿಕರ ತಂಗುದಾಣ ಮತ್ತು ನೂತನ ವೃತ್ತಗಳ ನಿರ್ಮಾಣದ ಹಿಂದೆ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳುವ ಉದ್ದೇಶ ಸ್ಪಷ್ಟವಾಗಿ ಕಾಣುತ್ತಿದೆ ಎಂಬುವುದು ಹಲವರ ವಾದವಾಗಿದೆ.
ಸ್ಥಳೀಯ ನಿವಾಸಿ ಫಾರುಕ್ ಅವರ ಪ್ರಕಾರ, ಮಂಗಳೂರು ಮತ್ತು ವಿಲ್ಲುಪುರಂ ಹೆದ್ದಾರಿ ಎಂದು ಘೋಷಣೆಗೂ ಮೊದಲಿನಿಂದಲೇ ರಸ್ತೆ ಬದಿಯಲ್ಲಿನ ಕಟ್ಟಡಗಳ ನಿರ್ಮಾಣ ಮತ್ತು ಸ್ವತ್ತುಗಳ ಹಕ್ಕು ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗಳಲ್ಲಿ ಜಾಗಗಳ ಮಾಲೀಕರುಗಳಿಂದ ರಸ್ತೆಯ ಮಧ್ಯಭಾಗದಿಂದ 120 ಅಡಿಗಳ ಒಳಗೆ ಕಟ್ಟಡ ನಿರ್ಮಾಣ ಮಾಡುವುದಿಲ್ಲವೆಂದು ಹಾಗೂ ಹೆದ್ದಾರಿ ನಿರ್ಮಾಣದ ವೇಳೆ ಯಾವುದೇ ತಕರಾರು ಮಾಡುವುದಿಲ್ಲವೆಂದು ಬಾಂಡ್ ಪೇಪರ್ ಬರೆಯಿಸಿಕೊಳ್ಳುತ್ತಿದ್ದಾರೆ. ಒಬ್ಬ ಜನಸಾಮಾನ್ಯ ಸಾಲಸೋಲ ಮಾಡಿ ಕಟ್ಟಡ ನಿರ್ಮಾಣಕ್ಕೆ ಅಥವಾ ಜಾಗದ ಹಕ್ಕು ಬದಲಾವಣೆಗೆ ನೂರಾರು ಕಾನೂನುಗಳನ್ನು ಪಾಲಿಸುವ ಸ್ಥಳೀಯ ಸಂಸ್ಥೆಗಳು ನೂತನ ಸರ್ಕಲ್ ಹಾಗೂ ಪ್ರಯಾಣಿಕರ ತಂಗು ನಿಲ್ದಾಣಕ್ಕೆ ಹೇಗೆ ಒಪ್ಪಿಗೆ ಕೊಟ್ಟವು ಎಂದು ಪ್ರಶ್ನಿಸಿದ್ದಾರೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಬಿದರಹಳ್ಳಿ ಗ್ರಾ.ಪಂ.ಪಿ.ಡಿ.ಓ ಮಧು ಅವರು : ಯಾರೂ ಕೂಡ ನಮ್ಮ ಬಳಿ ಪರವಾನಗಿ ಪಡೆದುಕೊಂಡಿಲ್ಲ, ಅಲ್ಲದೆ ಈ ವಿಚಾರವಾಗಿ ಯಾವುದೇ ಲಿಖಿತ ದೂರುಗಳು ಕೂಡ ಬಂದಿಲ್ಲ. ಯಾವ ಆಧಾರದ ಮೇಲೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂಬುವುದಾಗಿ ಪೂರ್ಣ ಮಾಹಿತಿ ಇಲ್ಲ. ಮಾಹಿತಿಗಳನ್ನು ಕಲೆಹಾಕಿ ಈ ವಿಚಾರದ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಅರ್ಚನಾ ಅವರು : ಈ ವಿಷಯದ ಬಗ್ಗೆ ನಮಗೆ ಯಾವುದೇ ದೂರುಗಳು ಅಥವಾ ಅನುಮತಿ ಕೋರಿ ಯಾವುದೇ ಪತ್ರ ಬಂದಿರುವುದಿಲ್ಲ. ಆದರೆ ಪ್ರಸ್ತುತ ಹೆದ್ದಾರಿ ನಿಯಮಾವಳಿಗಳ ಅಡಿಯಲ್ಲಿ ಹೆದ್ದಾರಿ ಕಾಮಗಾರಿ ಮುಗಿಯುವವರೆಗೂ ಯಾವುದೇ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಇಲ್ಲ. ಸರ್ಕಾರ ನಿಗದಿಪಡಿಸಿದ ಮಾರ್ಜಿನ್ ಗಿಂತ ಒಳಗಡೆ ಇದ್ದರೆ ರಸ್ತೆ ನಿರ್ಮಾದ ಅವಧಿಯಲ್ಲಿ ತೆಗೆದುಹಾಕಲಾಗುವುದು ಎಂದು ಮಾಹಿತಿ ನೀಡಿದರು.
ಹಲವಾರು ವರ್ಷಗಳಿಂದ ತಂಗುದಾಣ ನಿರ್ಮಾಣದ ಕುರಿತು ಎಲ್ಲರೂ ಒಟ್ಟುಗೂಡಿ ಹಲವಾರು ಪ್ರತಿಭಟನೆಗಳಿಗೆ ಜಗ್ಗದ ಸ್ಥಳೀಯ ಸಂಸ್ಥೆಗಳು ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ವೇಳೆಗೆ ಇದ್ದಕ್ಕಿದ್ದಂತೆ ಪ್ರಯಾಣಿಕರ ಬಗ್ಗೆ ಕಾಳಜಿ ಮೂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೆದ್ದಾರಿ ಕಾಮಗಾರಿ ಆರಂಭವಾಗಲಿದ್ದು ಪ್ರಯಾಣಿಕರ ತಂಗುದಾಣಕ್ಕೆ ವೆಚ್ಚವಾಗುತ್ತಿರುವ 1.5ಲಕ್ಷ ಸೇರಿದಂತೆ, ಹ್ಯಾಂಡ್ ಪೋಸ್ಟ್ ವೃತ್ತ ಹಾಗೂ ರಸ್ತೆÉ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಕುಡಿಯುವ ನೀರಿನ ಟ್ಯಾಂಕ್ ಎಲ್ಲವೂ ನಾಶವಾಗಲಿದೆ. ಒಟ್ಟಾರೆ ಸಾರ್ವಜನಿಕರ ತೆರಿಗೆ ಹಣ ಜಿಲ್ಲಾ ಪಂಚಾಯತಿ ಅಧಿಕಾರಿಗಳ ಅಸಡ್ಡೆಯಿಂದಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದಂತೂ ಸತ್ಯ.










