ಮೂಡಿಗೆರೆ : ವೈದ್ಯರ ಕೊರೊನ ವರದಿ ನೆಗಟಿವ್-ಕ್ವಾರಂಟೈನ್‍ನಲ್ಲಿದ್ದವರು ಸ್ವಗ್ರಾಮಕ್ಕೆ ರವಾನೆ…

486
firstsuddi

ಕೊಟ್ಟಿಗೆಹಾರ : ಮೂಡಿಗೆರೆ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರ ವೈದ್ಯರಿಗೆ ಕರೊನಾ ಪಾಸಿಟಿವ್ ಎನ್ನಲಾಗಿದ್ದ ವರದಿ ವಿವಿಧ ಹಂತದ ಮರು ಪರೀಕ್ಷೆಗಳಿಂದ ಕೊರೊನ ನೆಗೆಟಿವ್ ಬಂದ ಹಿನ್ನಲೆಯಲ್ಲಿ ತರುವೆಯ ಏಕಲವ್ಯ ವಸತಿ ಶಾಲೆಯ ಕ್ವಾರಂಟೈನ್‍ನಲ್ಲಿದ್ದ ವೈದ್ಯರೊಂದಿಗೆ ಪ್ರಥಮ ಹಂತದಲ್ಲಿ ಸಂಪರ್ಕದಲ್ಲಿದ್ದವರನ್ನು ಸ್ವಗ್ರಾಮಗಳಿಗೆ ಕಳಿಸಲಾಯಿತು.
ತರುವೆ ಏಕಲವ್ಯ ವಸತಿ ಶಾಲೆಯ ಕ್ವಾರಂಟೈನ್‍ನಲ್ಲಿ ಮಾಕೋನಹಳ್ಳಿ, ನಂದಿಪುರ,ಸಂಗಮಾಪುರ, ಕನ್ನಾಪುರದ 82 ಮಂದಿ ಇದ್ದರು. ಇಂದು ಮದ್ಯಾಹ್ನ ವೇಳೆಗೆ ವೈದ್ಯರ ಕೊರೊನ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಕ್ವಾರಂಟೈನ್‍ನಲ್ಲಿದ್ದ ಎಲ್ಲರನ್ನೂ ಮೂರು ಬಸ್ಸುಗಳಲ್ಲಿ ಸ್ವಗ್ರಾಮಕ್ಕೆ ಕಳಿಸಿಕೊಡಲಾಯಿತು.
ಸ್ವಗ್ರಾಮಗಳಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮಾಪುರದ ಕಲಾವತಿ, ಕಳೆದ ಕೆಲ ದಿನಗಳಿಂದ ತರುವೆಯ ಏಕಲವ್ಯ ಶಾಲೆಯಲ್ಲಿ ಕ್ವಾರಂಟೈನ್‍ನಲ್ಲಿದ್ದೆವು. ಇಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ವೈದ್ಯರ ಕೊರೊನ ವರದಿಯಲ್ಲಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ನಮ್ಮ ಮನೆಗೆ ಹೊರಟಿದ್ದೇವೆ ಎಂದರು.
ಕ್ವಾರಂಟೈನ್‍ನಿಂದ ಹೊರಡುವ ಮುನ್ನ ಕ್ವಾರಂಟೈನ್ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಅಧಿಕಾರಗಳಿಗೆ, ಸಿಬ್ಬಂದಿಗಳೀಗೆ ಕೈಮುಗಿದು ಚಪ್ಪಾಳೆ ತಟ್ಟಿ ಕೃತ್ಞಜತೆ ಸಲ್ಲಿಸಿದ ದೃಶ್ಯ ಕಂಡು ಬಂತು.
ಈ ಸಂದರ್ಭದಲ್ಲಿ ನೊಡಲ್ ಅಧಿಕಾರಿ ಮಲ್ಲಿಕಾರ್ಜುನ್, ಉಪ ತಹಶೀಲ್ದಾರ್ ರಾಜು, ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಆನಂದ್, ತರುವೆ ಗ್ರಾ.ಪಂ ಪಿಡಿಓ ಕೆ.ವಿ. ಶಾರದಾ, ಗ್ರಾಮ ಸಹಾಯಕ ಅಣ್ಣಪ್ಪ, ಪೂರ್ಣೇಶ್, ಸತೀಶ್, ಅರಣ್ಯ ಇಲಾಖೆಯ ಸಂತೋಷ್, ಮುಂತಾದವರು ಇದ್ದರು.