ಮೂಡಿಗೆರೆ : ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಕ್ಷೇತ್ರ ನೆನಪಾಗುವುದು ಚುನಾವಣೆ ಬಂದಾಗ – ಎಂ.ಎಸ್. ಅನಂತ್

196
firstsuddi

ಮೂಡಿಗೆರೆ : ಸ್ವಪಕ್ಷೀಯರಿಂದಲೇ “ ಗೋ ಬ್ಯಾಕ್ ಶೋಭಾ” ಅಭಿಯಾನ ಎದುರಿಸುತ್ತಿರುವ ಸಂಸದೆ ಶೋಭಾ ಕರಂದ್ಲಾಜೆಯವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದು, ವಿಷಯಾಂತರದ ಮೂಲಕ ಕಾಂಗ್ರೇಸ್ ಮೇಲೆ ಗೂಬೆ ಕೂರಿಸಿ ಜನರ ದಿಕ್ಕು ತಪ್ಪಿಸಿ ಲಾಭ ಪಡೆಯಲು ಹೆಣಗಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಎಂ.ಎಸ್. ಅನಂತ್ ಆರೋಪಿಸಿದ್ದಾರೆ.
ಅವರು ಬುಧವಾರ ಈ ಕುರಿತು ಹೇಳಿಕೆ ನೀಡಿದ್ದು, ಹಲವು ನಿರೀಕ್ಷೆ ಇಟ್ಟುಕೊಂಡಿದ್ದ ಈ ಕ್ಷೇತ್ರದ ಜನರಿಗೆ ಸಂಸದೆ ಶೋಭಾರವರು ನಿರಾಸೆ ಮೂಡಿಸಿದ್ದಾರೆ. “ಆದರ್ಶ ಗ್ರಾಮ” ಯೋಜನೆಗೆ ತೆಗೆದುಕೊಂಡಿದ್ದ ದಾರದಹಳ್ಳಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲಿಲ್ಲ. ರಾಷ್ಟ್ರೀಯ ಹೆದ್ದಾರಿಗಳನ್ನು ಕಡೆಗಣಿಸಿದ್ದಾರೆ. ಚಿಕ್ಕಮಗಳೂರು -ಸಕಲೇಶಪುರ ಹೊಸ ರೈಲು ಮಾರ್ಗಕ್ಕಾಗಿ ಪ್ರಯತ್ನಿಸಲಿಲ್ಲ ಎಂದು ದೂರಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಕಾಫಿ, ಕಾಳು ಮೆಣಸು, ಅಡಿಕೆ ಬೆಳೆಗಾರರಿಗೆ ಯಾವುದೇ ರೀತಿಯಲ್ಲೂ ನ್ಯಾಯ ಒದಗಿಸಲಿಲ್ಲ. ಯು.ಪಿ.ಎ. ಸರ್ಕಾರ ಇದ್ದಾಗ ಈ ಕುರಿತು ಟೀಕಿಸುತ್ತಿದ್ದ ಶೋಭಾರವರು, ಅವರದೇ ಸರ್ಕಾರದ ಅವಧಿಯಲ್ಲಿ ಅಡಿಕೆ ಕ್ಯಾನ್ಸರ್‍ಕಾರಕ ಎಂದು ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದರೂ ಸಂಸತ್‍ನಲ್ಲಿ ಹಾಗೂ ಹೊರಗೆ ಪ್ರಶ್ನಿಸಿ ಪ್ರತಿಭಟಿಸದಿರುವ ಉದ್ದೇಶವಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ತಾವು ಸಂಸದರಾಗಿದ್ದೂ ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸದೇ ಪ್ರಧಾನಿ ಮೋದಿಯವರ ಹೆಸರಿನಲ್ಲಿ ಈಗ ಮತ ಕೇಳಲು ಜನರ ಮುಂದೆ ಬರುತ್ತಿರುವುದನ್ನು ನೋಡಿದರೆ ಅವರಿಗೆ ಸೋಲುವ ಭೀತಿ ಕಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಳೆದ ಸಲ ಓಟು ಕೊಟ್ಟು ಗೆಲ್ಲಿಸಿದರೂ ದೆಹಲಿ ರಾಜಕಾರಣದಲ್ಲಿ ಮುಳುಗಿ ಕ್ಷೇತ್ರದತ್ತ ಮುಖಮಾಡದಿರುವ ಹಿನ್ನಲೆಯಲ್ಲಿ ಜನರು ಶೋಭಾರವರನ್ನು ತಿರಸ್ಕರಿಸಿಬಿಟ್ಟಿದ್ದಾರೆ. ಈ ಕಾರಣದಿಂದಲೇ “ಗೋ ಬ್ಯಾಕ್ ಶೋಭಾ” ಅಭಿಯಾನವನ್ನು ಸ್ವತಃ ಬಿಜೆಪಿಯವರೇ ಮಾಡಿದ್ದನ್ನು ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರು ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಕಳೆದ ಸಂಸತ್ ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಚಿನ್ನದ ರಸ್ತೆ ಮಾಡಲಿಲ್ಲ. ವಿದೇಶದಿಂದ ಕಪ್ಪು ಹಣ ತರಲಿಲ್ಲ. ಉದ್ಯೋಗ ಸೃಷ್ಟಿಸಲಿಲ್ಲ. ಬಡತನ ನಿರ್ಮೂಲನೆಗೆ ಪ್ರಯತ್ನಿಸಲಿಲ್ಲ. ಭ್ರಷ್ಟಾಚಾರಿಗಳು ವಿದೇಶಕ್ಕೆ ತೆರಳಿ ಸಾಕ್ಷ್ಯಧಾರಗಳ ನಾಶಗಳಿಗೆ ಅವಕಾಶ ಕಲ್ಪಿಸಿದ್ದಾರೆ. ಈಗ ಜನರೆದುರು ನಾಟಕವಾಡಿ ಅಭಿಮಾನಗಳಿಸಲು ಹೊಂಚುಹಾಕುತ್ತಿದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮಗೆ ಓಟುಕೊಟ್ಟು ಗೆಲ್ಲಿಸಲು ಮತದಾರರಲ್ಲಿ ಮತ ಕೇಳುವ ನೈತಿಕತೆ ಕಳೆದುಕೊಂಡಿರುವ ಸಂಸದೆ ಶೋಭಾರವರು, ಮೋದಿ ಹೆಸರಲ್ಲಿ ಮತ ಯಾಚಿಸುತ್ತಿರುವುದು ನಾಚಿಕೆಗೇಡಿನ ಪರಮಾವಧಿಯಾಗಿದೆ. ಶೋಭಾರವರಿಗೆ ಕ್ಷೇತ್ರದ ನೆನಪಾಗುವುದು ಚುನಾವಣೆ ಬಂದ ಮೇಲೆ ಎನ್ನುವುದು ಇದರೊಂದಿಗೆ ಜನರಿಗೆ ಮನವರಿಕೆಯಾಗಿದೆ. ಇವರನ್ನು ಈ ಚುನಾವಣೆಯಲ್ಲಿ ಜನರು ಮನೆಗೆ ಕಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರದಲ್ಲಿ ಯು.ಪಿ.ಎ. ಸರಕಾರದ ಅವಧಿಯಲ್ಲಿ ಅತ್ಯುತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಹಾಗೂ ಇಂದಿನ ಮೈತ್ರಿ ಸರ್ಕಾರದ ಜನಪರ, ರೈತಪರವಾಗಿ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ್ಗ ಸಹಿತ ಸಮಾಜದ ಎಲ್ಲಾ ತರಹದ ನಾಗರಿಕರಿಗೂ ಸಮಾಧಾನ ತರುವಂತಹ ಕೆಲಸಗಳನ್ನು ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಸತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‍ರವರಿಗೆ ಕ್ಷೇತ್ರದಲ್ಲಿ ನಿರೀಕ್ಷೆಗಿಂತಲೂ ಅಧಿಕ ಜನ ಬೆಂಬಲ ದೊರಕುತ್ತಿದೆ. ಈ ಸಲ ಬಿಜೆಪಿಗೆ ಕ್ಷೇತ್ರದ ಜನರು ತಕ್ಕ ಪಾಠವನ್ನು ಕಲಿಸುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.