ಮೂಡಿಗೆರೆ : ಹರಿ ಓಂ ಸೇವಾ ಸಮಿತಿ ವತಿಯಿಂದ ಹುತಾತ್ಮ ಯೋಧರಿಗೆ ನುಡಿ ನಮನ…

303
firstsuddi

ಮೂಡಿಗೆರೆ : 40 ಮಂದಿ ಸಿ.ಆರ್.ಪಿ.ಎಫ್. ಯೋಧರನ್ನು ಬಲಿ ಪಡೆದ ಜಮ್ಮು ಕಾಶ್ಮೀರಾದ ಪುಲ್ವಾಮ ಭಯೋತ್ಪಾದಕ ದಾಳಿ ನಡೆದು ಇಂದಿಗೆ ಒಂದು ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಹರಿ ಓಂ ಸೇವಾ ಸಮಿತಿ ವತಿಯಿಂದ ಹುತಾತ್ಮ ಯೋಧರಿಗೆ ನುಡಿ ನಮನ ಕಾರ್ಯಕ್ರಮವನ್ನು ಪಟ್ಟಣದ ಚೈತನ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ದಾಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿವೃತ್ತ ಯೋಧರ ಸಂಘದ ಅಧ್ಯಕ್ಷ ಮಗ್ಗಲಮಕ್ಕಿ ಚಂದ್ರೇಶ್ ಅವರು ಮಾತನಾಡಿ, ಯಾವುದೇ ಯೋಧ ತನ್ನ ಜೀವನದ ಎಲ್ಲಾ ಆಸೆಗಳನ್ನು ಬಿಟ್ಟು ಸೇನೆಗೆ ಸೇರುತ್ತಾನೆ. ಹೊರಗಿನ ಪ್ರಪಂಚದ ಅರಿವು ಆತನಿಗೆ ಇರುವುದಿಲ್ಲ. ಸರಿಯಾದ ಸಮಯಕ್ಕೆ ಊಟ ಉಪಚಾರದ ಮಾತುಗಳು ಕೇಳಲು ಸಾಧ್ಯವಿಲ್ಲ. ಆದರೆ ಪ್ರತೀಯೊಬ್ಬ ಯೋಧನ ಮನಸ್ಸಿನಲ್ಲಿ ದೇಶ ಕಾಯುವ ಯೊಚನೆ ಮಾತ್ರ ಸುಳಿದಾಡುತ್ತಿರುತ್ತದೆ. ಬಾರ್ಡರ್ ಗಳಲ್ಲಿ ಫೈರಿಂಗ್ ಇಲ್ಲದ ದಿನಗಳನ್ನು ಕಾಣಲು ಸಾಧ್ಯವಿಲ್ಲ. ಯಾವುದಾದರೂ ಯೋಧನಿಗೆ ಅನಾಹುತಗಳಾದಲ್ಲಿ ಮಾತ್ರ ಹೊರಗಿನ ಪ್ರಪಂಚಕ್ಕೆ ತಿಳಿಯುತ್ತದೆಯೇ ಹೊರತು ಬೇರೆ ಯಾವ ಮಾಹಿತಿಗಳೂ ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ. ಸೈನಿಕರುಗಳಿಗೆ ಜನರು ನೀಡುವ ಗೌರವ ಯುವಕರಿಗೆ ಸೇನೆಗೆ ಸೇರಲು ಹುಮ್ಮಸ್ಸು ನೀಡುತ್ತದೆ. ಇದು ಹೀಗೆಯೇ ಮುಂದುವರೆಯಲಿ ಎಂದರು.
ಪ್ರಾಸ್ಥಾವಿಕ ನುಡಿಯೊಂದಿಗೆ ಮಾತನಾಡಿದ ಕಣಚೂರ್ ವಿನೋದ್ ಅವರು, ಹಲವು ರಾಜಕೀಯ ಪಕ್ಷಗಳು ವೀರ ಯೋಧರ ಸಾವಿನ ವಿಚಾರಗಳನ್ನು ರಾಜಕೀಯ ಚಟುವಟಿಕೆಗಳಿಗೆ ಮೂಲವಸ್ತುಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಕುಟುಂಬ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಾಣದ ಊರಿಗೆ ಅದರಲ್ಲೂ ಸೇನೆಗೆ ಕಳುಹಿಸಿಕೊಡುವಾಗ ಅನುಭವಿಸುವ ನೋವಿನ ಬೆಲೆ ಇಂಥವರಿಗೆ ಅರ್ಥವಾಗುವುದಿಲ್ಲ. ಅದರಲ್ಲೂ ತಮ್ಮ ಮನೆಯ ಸದಸ್ಯ ವೀರ ಮರಣ ಹೊಂದಿದ ವಿಚಾರ ತಿಳಿದಾಗ ನೋವಿನ ಪ್ರಮಾಣ ಹೆಚ್ಚಾಗಿ ಇರುತ್ತದೆ. ದಯವಿಟ್ಟು ಸಾವಿನಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ, ಸೈನಿಕರ ಕುಟುಂಬಕ್ಕೆ ಬೆಲೆ ನೀಡುವ ಅಭ್ಯಾಸವನ್ನು ರಾಜಕೀಯ ನಾಯಕರುಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ 40 ಜನ ಯೋಧರ ಹೆಸರುಗಳನ್ನು ಹೇಳಿ ಅವರ ಸೇವೆಯನ್ನು ಸ್ಮರಿಸಲಾಯಿತು. ನಿಧನರಾದ ಯೋಧರ ಕುಟುಂಬಗಳ ಇಂದಿನ ಪರಿಸ್ಥಿತಿ ಅವಲೋಕಿಸಲಾಯಿತು. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ನಮನ ಸಲ್ಲಿಸಿ, ಮೌನಾಚರಣೆ ಆಚರಿಸಲಾಯಿತು. ನಿವೃತ್ತ ಯೋಧರಾದ ಮಗ್ಗಲಮಕ್ಕಿಯ ಎಂ.ಡಿ.ಉಮೇಶ್, ಹಾಗೂ ಕೆಲ್ಲೂರು ರಾಜಶೇಖರ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಣಚೂರು ಆನಂದ್ ಅವರು ಸ್ವಾಗತ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.