ಕೊಟ್ಟಿಗೆಹಾರ:ಬಿ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊಕ್ಕಳ್ಳಿಯಲ್ಲಿ ಇಂದು ಹುಲಿ ದಾಳಿಗೆ ಮತ್ತೊಂದು ಜಾನುವಾರು ಬಲಿಯಾಗಿದೆ.
ಎರಡು ದಿನದ ಹಿಂದೆ ಭಾರತಿಬೈಲ್‍ನಲ್ಲಿ ಹುಲಿ ದಾಳಿಯಿಂದ ಜಾನುವಾರು ಬಲಿಯಾದ ಘಟನೆ ಮಾಸುವ ಮುನ್ನವೇ ಮಂಗಳವಾರ ನಾಗೇಶ್ ಎಂಬುವವರಿಗೆ ಸೇರಿದ ಮತ್ತೊಂದು ಜಾನುವಾರು ಬಲಿಯಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಭಾರತಿಬೈಲ್, ಬಿ ಹೊಸಳ್ಳಿ, ಹೊಕ್ಕಳ್ಳಿ, ಕನ್ನಗೆರೆ ಬೆಳಗೋಡು ಸುತ್ತಮುತ್ತ ಕಳೆದ ಎರಡು ವರ್ಷದಲ್ಲಿ 10 ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿದ್ದು ಅರಣ್ಯ ಇಲಾಖೆ ಹುಲಿಯನ್ನು ಸ್ಥಳಾಂತರ ಮಾಡಬೇಕು ಎಂದು ಬಿ ಹೊಸಳ್ಲಿ ಸುತ್ತಮುತ್ತಲ್ಲಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಂಗಳವಾರ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ರಮೇಶ್, ಅರಣ್ಯ ರಕ್ಷಕ ಮೌಸಿನ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್, ಹುಲಿಯ ಚಲನವಲನಗಳ ಬಗ್ಗೆ ನಿಗಾ ಇಡಲು ಸಿಬ್ಬಂದಿಗಳಿಗೆ ಸೂಚಿಸಲಾಗಿದ್ದು ಹುಲಿಯನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಲಾಗುವುದು. ಸಾದ್ಯವಾಗದೇ ಇದ್ದಲ್ಲಿ ಬೋನು ಇಟ್ಟು ಹುಲಿ ಸೆರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.










