ಮೂಡಿಗೆರೆ : ಹೊಯ್ಸಳರ ವಾಸ್ತುಶಿಲ್ಪವು ದ್ರಾವಿಡ ಮತ್ತು ಆರ್ಯಶೈಲಿ ಎರಡನ್ನೂ ಅನುಸರಿಸಿದ ಗುಣದ್ದಾಗಿದೆ : ಡಾ.ಸಂಪತ್ ಬೆಟ್ಟಗೆರೆ.

540
firstsuddi

ಮೂಡಿಗೆರೆ : ತಾಲ್ಲೂಕಿನ ಬಣಕಲ್ ಹೋಬಳಿಯಲ್ಲಿರುವ ದೇವರಮನೆಯು ಕಲ್ಲಿನ ರಚನೆಯನ್ನು ಪ್ರಧಾನವಾಗಿ ಹೊಂದಿರುವ ಪ್ರಾಚೀನ ಕಾಲಘಟ್ಟದ ದೇಗುಲವನ್ನು ಹೊಂದಿದೆ. ಜೊತೆಗೆ ಇಲ್ಲಿ ಕಾಲಭೈರವನ ಆರಾಧನೆಯನ್ನು ಹಲವಾರು ತಲೆಮಾರುಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಇಲ್ಲಿರುವ ದೇವಾಲಯವನ್ನು ವಿಶೇಷವಾಗಿ ಮೂಲತಃ ದ್ರಾವಿಡ ಶೈಲಿಯನ್ನು ಅನುಸರಿಸಿ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯ ಲೇಖಕ ಡಾ.ಸಂಪತ್ ಬೆಟ್ಟಗೆರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಗುರುವಾರ ಇಳಿಸಂಜೆ ದೇವರಮನೆ ಪರಿಸರದಲ್ಲಿ ಹಾಸನ ಆಕಾಶವಾಣಿ ಕೇಂದ್ರದವರು ಏರ್ಪಡಿಸಿದ್ದ ‘ವಾರಕ್ಕೊಂದು ತಾಣ’ ವಿಶೇಷ ನೇರಪ್ರಸಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೊಯ್ಸಳರ ವಾಸ್ತುಶಿಲ್ಪವು ದ್ರಾವಿಡ ಮತ್ತು ಆರ್ಯಶೈಲಿ ಎರಡನ್ನೂ ಅನುಸರಿಸಿದ ಗುಣದ್ದಾಗಿದೆ. ಅದರಲ್ಲಿ ರಾಮಾಯಣ ಮತ್ತು ಮಹಾಭಾರತದ ದೃಶ್ಯಾವಳಿಗಳು, ನರ್ತಿಸುತ್ತಿರುವ ಶಿಲಾಬಾಲಿಕೆಯರ ಚಿತ್ರ ಇರುತ್ತದೆ. ಈ ವಾಸ್ತುಶಿಲ್ಪವು ದೇವರ ಮನೆ ದೇವಾಲಯದ ಪ್ರವೇಶ ದ್ವಾರದ ಪ್ರಾಂಗಣದಲ್ಲಿದೆ. ಜೊತೆಗೆ ದೇವಾಲಯದ ಹಜಾರದ ಮೇಲಿನ ಚಪ್ಪಟೆಯಾದ ಚಾವಣಿ, ಗರ್ಭಗುಡಿಯ ಮೇಲೆ ಸಮತಟ್ಟಾದ ಅಂತಸ್ತುಗಳಿಂದ ಕೂಡಿದ ಶಿಖರ, ದ್ವಾರಪಾಲಕ ಶಿಲ್ಪಗಳು, ಪ್ರಧಾನ ಗುಡಿಯ ಸುತ್ತ ಪರಿವಾರ ದೇವತೆಗಳನ್ನು ಗಮನಿಸಿಗೊಂಡಾಗ ಹೊಯ್ಸಳರ ಸಾಂಸ್ಕøತಿಕ ಛಾಯೆ ಪ್ರಧಾನವಾಗಿ ಅರಿವಿಗೆ ಬರುತ್ತದೆ. ಅಲ್ಲದೆ ಬಲ್ಲಾಳ ಎಂಬ ದೊರೆಯು ಶತ್ರುಗಳಿಂದ ರಕ್ಷಣೆಯನ್ನು ಪಡೆಯುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದನೆಂದು ಪೂರ್ವಿರಿಂದ ಕೇಳಿ ತಿಳಿದ ಸ್ಥಳ ಪುರಾಣವನ್ನು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಆದ್ದರಿಂದ ಇದು ಹೊಯ್ಸಳ ಕಾಲದ ದೇವಾಲಯ ಎಂಬುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ತಿಳಿಸಿದರು.
ದೇವರ ಮನೆ ಸಮೀಪದ ಕೊಟ್ರಕೆರೆ ಗ್ರಾಮದ ಸಾಂಸ್ಕೃತಿಕ  ಪರಿಚಾರಕರಾದ ಶ್ರೀಮತಿ ಶಾಂತಲಾ ನಾಗೇಶ್ ಅವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡು ಮಾತನಾಡಿದರು. ದೇವರ ಮನೆಯು ಪ್ರಾಕೃತಿಕವಾಗಿ ಬಹಳ ಮಹತ್ವವನ್ನು ಹೊಂದಿದೆ. ಇದು ಪಶ್ಚಿಮ ಘಟ್ಟದ ಪ್ರಮುಖ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚು ಮಳೆಬೀಳುವುದರಿಂದ ಸುತ್ತಮುತ್ತಲಿನ ರೈತರು ಬೆಳೆಹಾನಿಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂದು ತಿಳಿಸಿದರು. ಇಲ್ಲಿನ ಪರಿಸರವನ್ನು ದೂರದ ಊರುಗಳಿಂದ ಬರುವ ಪ್ರವಾಸಿಗರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಸೇರಿದಂತೆ ಕರಗದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯಬಾರದೆಂದು ಆಕಾಶವಾಣಿಯ ಮೂಲಕ ಕಳಕಳಿಯಿಂದ ಕೋರುತ್ತೇನೆ ಎಂದರು. ದೇವಾಲಯದ ಧರ್ಮದರ್ಶಿ ಹೆಸಗೋಡು ಮದನ್ ಹೆಗ್ಗಡೆ ಅವರು ಮಾತನಾಡಿ ಮೂಡಿಗೆರೆ ತಾಲ್ಲೂಕಿನ ನಮ್ಮುಡುಗ್ರು ವಾಟ್ಸಾಪ್ ತಂಡದವರು ಇಲ್ಲಿನ ಪರಿಸರದಲ್ಲಿ ಪ್ರವಾಸಿಗರು ಎಸೆದು ಹೋಗಿದ್ದ ಘನ ತ್ಯಾಜ್ಯವನ್ನು ಸ್ವಯಂಪ್ರೇರಿತರಾಗಿ ಸ್ವಚ್ಚಮಾಡಿದನ್ನು ತಿಳಿಸಿದಾಗ, ಆಕಾಶವಾಣಿ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಸತತ ಒಂದು ಗಂಟೆಯ ಈ ನೇರ ಪ್ರಸಾರವನ್ನು ರಾಜ್ಯದಾದ್ಯಂತ ಶೋತೃಗಳು ಆಲಿಸಿದರು. ಹಾಸನ ಆಕಾಶವಾಣಿ ಕೇಂದ್ರದ ಎಂ.ಶಿವಕುಮಾರ್, ಜಿ.ಡಿ.ರಮೇಶ್, ಶ್ರೀಮತಿ ಮೋಹನಾಕ್ಷಿ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಅರ್ಚಕ ನಾಗಭೂಷಣ ಭಟ್, ಹೆಸಗೋಡು ಅರುಣ್ ಕುಮಾರ್, ಸುನಿಲ್, ಹರ್ಷ, ಉಪೇಂದ್ರ ಮುಂತಾದವರಿದ್ದರು.