ಸುಧೀರ್.ಬಿ.ಟಿ. ಮೂಡಿಗೆರೆ.
ಮೂಡಿಗೆರೆ : ನೂತನ ವರ್ಷದ ಸ್ವಾಗತಕ್ಕೆ ಮಲೆನಾಡು ಸಜ್ಜಾಗಿದೆ. ಹಿಂದಿನ ವರ್ಷದ ಕಹಿ ನೆನಪುಗಳನ್ನು ಮರೆತು, ಸಿಹಿ ಸಂಗತಿಗಳ ಜೊತೆಗೂಡಿ ನೂತನ ಸಂವತ್ಸರದ ಸಾಗತಕ್ಕೆ ಮಲೆನಾಡಿಗರು ಸಜ್ಜಾಗಿದ್ದಾರೆ. ಹೊಸ ವರ್ಷಾಚರಣೆಯನ್ನು ಅದ್ದೂರಿಯಾಗಿ ನಡೆಸಲು ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ತಯಾರಿ ನಡೆಸಲಾಗಿದೆ.
ತಾಲ್ಲೂಕಿನ ಹೊಟೆಲ್‍ಗಳು , ರೆಸ್ಟೋರೆಂಟ್, ಹೋಂಸ್ಟೇಗಳು ಹಾಗೂ ರೆಸಾರ್ಟ್‍ಗಳಲ್ಲಿ ಹೊಸ ವರ್ಷಾಚರಣೆಗೆ ಭರ್ಜರಿ ತಯಾರಿ ನಡೆಸಲಾಗಿದೆ. ಯುವಕರು ನೂತನ ವರ್ಷಾಚರಣೆಗೆ ಕಾತರರಾಗಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿ ಆಚರಣೆಯನ್ನು ಅನುಕರಣೆ ಮಾಡುತ್ತಿರುವ ಅನೇಕರು ಹೊಸ ವರ್ಷಾಚರಣೆಯ ಆಚರಣೆಗೆ ಗಲ್ಲಿ ಗಲ್ಲಿಗಳಲ್ಲಿ ತಯಾರಿ ನಡೆಸಿದ್ದಾರೆ.
ದೂರದ ಊರುಗಳಿಂದ ಬಂಧುಗಳ ಮತ್ತು ಸ್ನೇಹಿತರುಗಳ ಆಗಮನವಾಗುತ್ತಿರುವುದು ಕಂಡುಬರುತ್ತಿದೆ. ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಅನೇಕರು ಮಲೆನಾಡಿನ ಕಡೆಗೆ ಧಾವಿಸುತ್ತಿದ್ದು, ಒಂದು ತಿಂಗಳ ಮುಂಚಿತವಾಗಿ ಹೊಸ ವರ್ಷಾಚರಣೆಯ ಆಚರಣೆಗೆ ಬುಕಿಂಗ್ ಮಾಡಿಕೊಂಡಿದ್ದಾರೆ. ಇತ್ತ ಹೋಂ ಸ್ಟೇ ಹಾಗೂ ರೆಸಾರ್ಟ್‍ಗಳಲ್ಲಿ ಹೊಸ ವರ್ಷದ ಸ್ವಾಗತಕ್ಕಾಗಿ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೊಸ ಶೈಲಿಯ ಸಂಭ್ರಮಾಚರಣೆಗಳಿಗೆ ಒತ್ತು ನೀಡಲಾಗುತ್ತಿದೆ. ಅಬ್ಬರದ ಸಂಗೀತ ಕಾರ್ಯಕ್ರಮಗಳು, ಗುಂಡು ಪಾರ್ಟಿಗಳ ಜೊತೆಗೆ ತಹರೇವಾರಿ ಸಸ್ಯಾಹಾರಿ ಹಾಗೂ ಮಾಂಸಹಾರಿ ಭಕ್ಷ್ಯ ಭೋಜನಗಳಿಗೆ ತಯಾರಿ ನಡೆಸಲಾಗಿದೆ.
ಇದರ ನಡುವೆ ಹಿರಿಯ ವಾಸುದೇವ ನಾಯಕ್ ಅವರು ಹೊಸ ವರ್ಷಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ನಾವು ಹಿಂದೂ ಧರ್ಮದವರು, ಯುಗಾದಿ ಹಬ್ಬದ ದಿನವೇ ನಮ್ಮ ನೂತನ ವರ್ಷ ಪ್ರಾರಂಭ ಆಗುವುದು. ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸುವ ಅಗತ್ಯ ನಮಗಿಲ್ಲ, ಹೊಸ ವರ್ಷಾಚರಣೆಗೂ ತಮಗೂ ಸಂಬಂಧವಿಲ್ಲ. ಎಂದಿನಂತೆ ನಾವು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಮಗ್ನರಾಗುತ್ತೇವೆ.

ಸೂರ್ಯೋದಯಕ್ಕೂ ಮುನ್ನ ನಮ್ಮವರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿ, ಸ್ನಾನ ಮಾಡಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಹೊಸ ವರ್ಷದಲ್ಲಿ ಎಲ್ಲರಿಗೂ ಒಳಿತಾಗುವಂತೆ ಕೇಳಿಕೊಳ್ಳುವುದು ನಮ್ಮ ಸಂಪ್ರದಾಯ. ಹೊಸ ವರ್ಷಾಚರಣೆ ನೆಪದಲ್ಲಿ ಕುಡಿದು ಮೋಜು ಮಸ್ತಿ ಮಾಡಿ ಸಂಭ್ರಮ ಪಡುವುದರಲ್ಲಿ ಅರ್ಥವೇ ಇಲ್ಲ. ಇಂದಿನ ಯುವ ಜನತೆ ತುಂಡು-ಗುಂಡಿನ ಜೊತೆಯಲ್ಲಿ ಕುಣಿದು ಕುಪ್ಪಳಿಸಿ ಮಧ್ಯರಾತ್ರಿಯಲ್ಲಿ ನಿದ್ದೆಗೆಟ್ಟು ಹೊಸ ವರ್ಷವನ್ನು ಬರಮಾಡಿಕೊಂಡು, ಸೂರ್ಯ ನೆತ್ತಿಯವರೆಗೆ ಬಂದರೂ ಕುಡಿದ ಮತ್ತಿನಲ್ಲಿ ಏಳುವುದು ಎಷ್ಟರ ಮಟ್ಟಿಗೆ ಸರಿ ಇದೆ ಎಂದು ಅವಲೋಕಿಸಬೇಕು. ಸಾತ್ವಿಕ ಮನೋಭಾವದ ನಮ್ಮ ಸಂಪ್ರದಾಯದ ಮುಂದೆ ಯಾವ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಹತ್ವ ಇರಲಾರದು. ಇದನ್ನು ಜೀವನದಲ್ಲಿ ಅನುಷ್ಠಾನಕ್ಕೆ ತಂದರೆ ಎಲ್ಲರಿಗೂ ಒಳ್ಳೆಯದು ಎಂದು ಅಭಿಪ್ರಾಯ ಪಟ್ಟರು.
ಹೊಸ ವರ್ಷದ ಸಂಭ್ರಮಾಚರಣೆ ನಡೆಯುವುದು ಮನೆಗಳಿಗಿಂತ ಹೊರಗಡೆಯೇ ಹೆಚ್ಚು, ಆದುದರಿಂದ ಇಂಥಹ ಸಂದರ್ಭಗಳಲ್ಲಿ ಯಾವುದೇ ಅವಘಡ ಸಂಭವಿಸದಂತೆ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಂಡಿದೆ. ಬಹುತೇಕ ಕಡೆ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ. ಪಟ್ಟಣದ ಬಹುತೇಕ ಕಡೆಗಳಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಮಫ್ತಿ ಪೋಲೀಸರನ್ನು ನಿಯೋಜಿಸಲಾಗಿದೆ ಹಾಗೂ ಕಾರ್ಯಕ್ರಮಗಳ ಆಯೋಜಕರಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಂಬುಲೆನ್ಸ್ ಹಾಗೂ ಆರೋಗ್ಯ ಸೇವೆ ತ್ವರಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದ್ದು, ಅಗ್ನಿಶಾಮಕ ದಳ ಕೂಡ ಕಾರ್ಯ ನಿರ್ವಹಿಸಲು ಸಜ್ಜಾಗಿದೆ. ರಾತ್ರಿ ಒಂದು ಗಂಟೆಯವರೆಗೆ ಮಾತ್ರ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಹೊಸ ವರ್ಷ 2020 ಅನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿದ್ದು, ಡಿಸೆಂಬರ್-31ರ ಮಂಗಳವಾರ ಮಧ್ಯರಾತ್ರಿ 12 ಗಂಟೆ ಅದ್ಭುತ ಕ್ಷಣಗಳಿಗೆ ನಾಂದಿಯಾಗಲಿದೆ. ಎಲ್ಲರ ಚಿತ್ತ ಹೊಸ ವರ್ಷವನ್ನು ಸ್ವಾಗತಿಸುವ ಜೊತೆಗೆ ಮೋಜು ಮಸ್ತಿ , ಶೃಂಗಾರ, ರಂಗು-ವೈಭೋಗಗಳ ನಡುವೆ ಎಚ್ಚರದಿಂದ ಇದ್ದು ಕ್ಷೇಮವಾಗಿ ಇರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.










