ನ್ಯೂಯಾರ್ಕ್ : ಮನುಷ್ಯರಲ್ಲಿ ಕಾಣಿಸಿಕೊಂಡು ಇಡೀ ವಿಶ್ವವನ್ನೇ ಬೆರಗಾಗಿಸಿರುವ ಮಹಾಮಾರಿ ಕೊರೊನಾ ವೈರಸ್ ಈಗಾ ಕಾಡು ಪ್ರಾಣಿಗಳಲ್ಲೂ ಕಾಣಿಸಿಕೊಂಡಿದ್ದು, ಅಮೇರಿಕಾದಲ್ಲಿ ಕೊರೊನಾ ವೈರಸ್ ತನ್ನ ಮರಣ ಮೃದಂಗವನ್ನು ಬಾರಿಸುತ್ತಿರುವ ಬೆನ್ನಲ್ಲೇ ವಿಶ್ವದಲ್ಲೇ ಮೊದಲ ಬಾರಿಗೆ ಕಾಡು ಪ್ರಾಣಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ವರದಿಯಾಗಿದೆ. ನ್ಯಾಯಾರ್ಕ್‍ನ ಬ್ರಾನ್ಸ್ ಮೃಘಾಲಯದ ನಾಡಿಯಾ ಎಂಬ ಮಲಯನ್ ಹುಲಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೃಘಾಲಯದ ಮುಖ್ಯ ಪಶುವೈದ್ಯಾಧಿಕಾರಿ ಪೌಲ್ ಅವರು ಮನುಷ್ಯರಿಂದ ಕಾಡು ಪ್ರಾಣಿಗಳಿಗೆ ವೈರಸ್ ತಗುಲಿರುವುದು ಇದೇ ಮೊದಲ ಪ್ರಕರಣ. ಮೃಘಾಲಯದಲ್ಲಿ ಕೆಲಸ ಮಾಡುತ್ತಿದ್ದ ಕೊರೊನಾ ಸೋಂಕಿತ ಸಿಬ್ಬಂದಿಯಿಂದ ಈ ಹುಲಿಗೆ ಸೋಂಕು ತಗುಲಿರಬಹುದು. ಹುಲಿಗೆ ಕಳೆದ ಒಂದು ವಾರದ ಹಿಂದೆ ಒಣ ಕೆಮ್ಮು ಕಾಣಿಸಕೊಂಡಿತ್ತು, ಬಳಿಕ ವೈದ್ಯರು ಹುಲಿಗೆ ಚಿಕಿತ್ಸೆ ನೀಡಿದ್ದರು. ಆದರೆ ಕೆಮ್ಮು ಕಡಿಮೆ ಆಗಿರಲಿಲ್ಲ. ಬಳಿಕ ವೈದ್ಯರು ಕೊರೊನಾ ಪರೀಕ್ಷೆ ಮಾಡುವುದಾಗಿ ಹೇಳಿ ಏಪ್ರಿಲ್ 2ರಂದು ಹುಲಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದರು. ಈಗಾ ಪರೀಕ್ಷೆಯ ವರದಿ ಬಂದಿದ್ದು, ಹುಲಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಅಲ್ಲದೇ ಸೋಂಕಿತ ಹುಲಿಯೊಂದಿಗೆ ಇದ್ದ 2 ಸೈಬೇರಿಯನ್ ಹುಲಿಗಳು, 3 ಆಫ್ರಿಕನ್ ಹುಲಿಗಳಲ್ಲಿಯೂ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಅವುಗಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.










