ಚಿಕ್ಕಮಗಳೂರು: ಕಳೆದ ಮೂರು ದಿನಗಳ ಹಿಂದೆ ಮೆದುಳು ನಿಷ್ಕ್ರಿಯತೆಗೊಳಗಾಗಿದ್ದ ಜಿಲ್ಲೆಯ ಗೌರಿಕಾಲುವೆಯ ನಿವಾಸಿ ಸಹನಾ ಜೋನ್ಸ್ ರೂಬೆನ್ ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇತರೆ ಐದು ಮಂದಿಗೆ ಅವರು ಜೀವ ನೀಡಿದ್ದಾರೆ.
ಸಹನಾ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರರಾದ ರೋಬಿನ್ ಮೊಸೆಸ್ ಅವರ ಧರ್ಮಪತ್ನಿ. ಬ್ರೈನ್ ಟ್ಯೂಮರ್ ಖಾಯಿಲೆಯಿಂದ ಮೆದುಳು ನಿಷ್ಕ್ರಿಯಗೊಂಡು ಕಳೆದ ಮೂರು ದಿನಗಳಿಂದ ಐಸಿಯುನಲ್ಲಿದ್ದ ಸಹನಾ ಅವರ ಅಂಗಾಂಗಗಳ ದಾನಕ್ಕೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ.
ಸದಾ ಕ್ರಿಯಾಶೀಲರಾಗಿ, ಆರೋಗ್ಯವಾಗಿದ್ದ ಸಹನಾ ಅವರು ಕಳೆದ ಶನಿವಾರ ತಮ್ಮ ಮನೆಯಲ್ಲಿದ್ದ ವೇಳೆ ದಿಢೀರ್ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನ ನಗರದ ಸ್ಪಂದನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಸಹನಾ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ವೈದ್ಯರು ಬ್ರೈನ್ ಟ್ಯೂಮರ್ ಇರುವುದನ್ನು ಪತ್ತೆ ಮಾಡಿದ್ದರು. ಶಿವಮೊಗ್ಗದ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವುದನ್ನ ದೃಢಪಡಿಸಿದ ಹಿನ್ನೆಲೆಯಲ್ಲಿ ಸಹನಾ ರೂಬೆನ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಕಳೆದ 2 ದಿನಗಳಿಂದ ಐಸಿಯುನಲ್ಲಿ ದಾಖಲು ಮಾಡಲಾಗಿತ್ತು. ಸಹನಾ ಅವರ ಮೆದುಳು ಹೊರತುಪಡಿಸಿ ಉಳಿದೆಲ್ಲಾ ಅಂಗಾಂಗಗಳು ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿನ್ನೆಲೆ ಸಹನಾ ಪತಿ ರೂಬೆನ್ ಅವರು ಪತ್ನಿಯ ಬಯಕೆಯಂತೆ ಬಹು ಅಂಗಾಂಗಗಳ ದಾನಕ್ಕೆ ನಿರ್ಧರಿಸಿದ್ದರು. ಇದನ್ನು ತಮ್ಮ ಕುಟುಂಬಸ್ಥರೊಂದಿಗೆ ಚರ್ಚಿಸಿದ ಅವರು ಕುಟುಂಬಸ್ಥರ ಒಪ್ಪಿಗೆ ಬಳಿಕ ಬಹು ಅಂಗಾಂಗಗಳ ದಾನಕ್ಕೆ ಸಮ್ಮತಿ ನೀಡಿದ್ದರು.
ಮೆದುಳು ನಿಷ್ಕ್ರಿಯಗೊಂಡಿದ್ದ ಸಹನಾ ಅವರ ಅಂಗಾಂಗ ದಾನಕ್ಕೆ ಕುಟುಂಬದ ಸದಸ್ಯರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮೋಹನ್ ಕುಮಾರ್ ಜೀವನ ಸಾರ್ಥಕತೆ ಸಂಸ್ಥೆಯೊಂದಿಗೆ ಚರ್ಚಿಸಿ ಶನಿವಾರ ಹಾಗೂ ಭಾನುವಾರ ಬಹು ಅಂಗಾಂಗಗಳನ್ನು ಬೇರ್ಪಡಿಸುವುದು ಹಾಗೂ ಅಂಗಾಂಗಗಳ ರವಾನೆಗೆ ಮರು ಜೋಡಣೆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಸಹನಾ ಅವರ ಹೃದಯದ ರಕ್ತದ ಮಾದರಿ ಹೊಂದಿಕೆಯಾಗದ ಕಾರಣಕ್ಕೆ ಹೃದಯ ಹೊರತು ಪಡಿಸಿ ಕಣ್ಣು, ಕಿಡ್ನಿ, ಲಿವರ್ ಸೇರಿದಂತೆ ಐದು ಅಂಗಾಂಗಳ ದಾನಕ್ಕೆ ವೈದ್ಯರು ಸಿದ್ಧತೆ ಕೈಗೊಂಡಿದ್ದರು.
ನಿನ್ನೆ ಮಧ್ಯಾಹ್ನ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ನೇತೃತ್ವದಲ್ಲಿ 2 ತಜ್ಞ ವೈದ್ಯರ ತಂಡ ಸಹನಾ ರೂಬೆನ್ ಅವರ ಅಂಗಾಂಗ ದಾನದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕಣ್ಣು, ಕಿಡ್ನಿ, ಲಿವರ್ ಸೇರಿದಂತೆ ದೇಹದ 5 ಅಂಗಗಳನ್ನು ಬೇರ್ಪಡಿಸಿದ್ದು, ಮರು ಜೋಡಣೆಗಾಗಿ ಅಂಗಾಂಗಗಳನ್ನು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಅಪೊಲೋ ಆಸ್ಪತ್ರೆ ಹಾಗೂ ಮಂಗಳೂರಿನ ಎಜೆ ಆಸ್ಪತ್ರೆಗೆ ರವಾನಿಸಲಾಯಿತು.
ಈ ವೇಳೆ ಪತ್ನಿ ನೆನೆದು ರೂಬೆನ್ ಕಣ್ಣೀರಿಟ್ಟರು. ನನ್ನ ಮಡದಿಯ ಅಂಗಾಂಗದಿಂದ ನಾಲ್ಕು ಜನರ ಪ್ರಾಣ ಉಳಿಯಲಿ, ಸಂತೋಷದಿಂದ ಅಂಗಾಂಗ ದಾನ ಮಾಡಿದ್ದೇವೆ ಎಂದರು. ಸಹನಾ ಮೊಸೆಸ್, ಪತಿಯಂತೆ ತಾನೂ ಕೂಡ ಸಮಾಜಸೇವಕಿಯಾಗಿದ್ದರು.
ಸಹನಾ ಜೋನ್ಸ್ ಅವರ ಅಂಗಾಂಗ ಕಸಿ ಮಾಡುವ ಮೂಲಕ ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯು ಎರಡನೇ ಬಾರಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಮೊದಲು ಬಸ್‌ನಿಂದ ಬಿದ್ದು ಗಾಯಗೊಂಡು ಮೆದುಳು ನಿಷ್ಕ್ರಿಯತೆಗೊಳಗಾಗಿದ್ದ ವಿದ್ಯಾರ್ಥಿನಿ ರಕ್ಷಿತಾ ಬಾಯಿ ಅವರ ಅಂಗಾಂಗಗಳನ್ನು ದಾನ ಮಾಡಲಾಗಿತ್ತು.










