ಮೈಸೂರು: ಬಿಗ್ ಬಾಸ್ ಕನ್ನಡ ಸೀಸನ್ 6ರ ವಿಜೇತ ಶಶಿ ಅವರ ಕಾಲಿಗೆ ಗಾಯವಾಗಿದೆ. ಶಶಿ ನಾಯಕನಾಗಿ ನಟಿಸುತ್ತಿರುವ ‘ಮೆಹಬೂಬಾ’ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡಿರುವ ಅವರು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಮೈಸೂರಿನ ಕಾಲೇಜಿನಲ್ಲಿ ಕಟ್ಟಡದ ಮೇಲೆ ಹತ್ತುವ ಸೀನ್ ಇತ್ತು. ಇದನ್ನು ರಿಯಲಿಸ್ಟಿಕ್ ಆಗಿ ಶೂಟಿಂಗ್ ಮಾಡುವಾಗ ಈ ಅವಘಡ ಸಂಭವಿಸಿದೆ. ಕಟ್ಟಡವನ್ನು ಹತ್ತುವಾಗ ಹಳೆಯ ಕಟ್ಟಡವಾದ್ದರಿಂದ ಹಗ್ಗವನ್ನು ಕಟ್ಟಿದ್ದರೂ ಕೂಡ ಸಿಮೆಂಟ್ ಸ್ವಲ್ಪ ಬಿಟ್ಟುಕೊಂಡಿದ್ದರಿಂದ ಹಗ್ಗವೂ ಜಾರಿಗೆ. ಹೀಗಾಗಿ, ನಾನು ಸುಮಾರು 8 ಅಡಿ ಎತ್ತರದಿಂದ ಬಿದ್ದಿದ್ದೇನೆ. ಆಗ ನನ್ನ ಕಾಲಿಗೆ ಸ್ವಲ್ಪ ಗಾಯವಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದೇನೆ. ಈಗ ನಾನು ಸಂಪೂರ್ಣ ಗುಣಮುಖವಾಗಿದ್ದೇನೆ. ಈಗ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ ಎಂದು ಶಶಿ ಅವರು ಹೇಳಿಕೊಂಡಿದ್ದಾರೆ.
ಮಾಡ್ರನ್ ರೈತ ಎಂದೇ ಫೇಮಸ್ ಆಗಿದ್ದ ಬಿಗ್ ಬಾಸ್ ಶಶಿ ಅವರು ಕೃಷಿ ಮತ್ತು ಸಿನಿಮಾರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಗೊಂಬೆಗಳ ಲವ್’ ಖ್ಯಾತಿಯ ಪಾವನಾ ಜೊತೆ ‘ಮೆಹಬೂಬಾ’ ಎಂಬ ಲವ್‌ಸ್ಟೋರಿ ಹೇಳಲು ಶಶಿ ರೆಡಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.










