‘ಪೂಜಿಸಲೆಂದೇ ಹೂಗಳ ತಂದೆ’- ರಾಮನ ಸ್ಮರಿಸುವ ಕನ್ನಡ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ.

51
firstsuddi

ನವದೆಹಲಿ: ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾನ ಕಾರ್ಯಕ್ರಮ ನೆರವೇರಲಿದ್ದು, ಅದಕ್ಕೆ ಪೂರ್ವ ತಯಾರಿ ಈಗಾಗಲೇ ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮನ ಕುರಿತ ಕನ್ನಡದ ಹಾಡೊಂದಕ್ಕೆ ತಲೆದೂಗಿದ್ದಾರೆ.
ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಹಾಡಿರುವ ‘ಪೂಜಿಸಲೆಂದೇ ಹೂಗಳ ತಂದೆ’ ಈ ಹಾಡಿನ ತುಣುಕನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ನಲ್ಲೇನಿದೆ?
“ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ” ಎಂದು ಮೋದಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಸಂತಸ ವ್ಯಕ್ತಪಡಿಸಿದ್ದು, “ತುಂಬಾ ಧನ್ಯವಾದಗಳು ಸರ್. ಇದು ಕಲ್ಪನೆಗೂ ಮೀರಿದ ಗೌರವ. ನಿಮಗೆ ನನ್ನ ಪ್ರಣಾಮಗಳು” ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

‘ಪೂಜಿಸಲೆಂದೇ ಹೂಗಳ ತಂದೆ’ ಹಾಡು ಮೂಲತಃ ದೊರೈ-ಭಗವಾನ್ ಜೋಡಿಯಿಂದ ನಿರ್ದೇಶಿಸಲ್ಪಟ್ಟ ರಾಜ್‌ಕುಮಾರ್ ನಟನೆಯ ‘ಎರಡು ಕನಸು’ ಸಿನಿಮಾದ ಹಾಡು. ಕನ್ನಡದ ಶ್ರೇಷ್ಠ ಪ್ರಣಯ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಈ ಸಿನಿಮಾ 1974ರಲ್ಲಿ ತೆರೆ ಕಂಡಿತ್ತು. ಚಿ. ಉದಯಶಂಕರ್ ಅವರು ಬರೆದಿದ್ದ ಸಾಹಿತ್ಯಕ್ಕೆ ರಾಜನ್ ನಾಗೇಂದ್ರ ಸಂಗೀತ ಸಂಯೋಜನೆ ಮಾಡಿದ್ದರು. ಗಾನ ಸರಸ್ವತಿ ಎಸ್. ಜಾನಕಿ ಅವರು ಅದ್ಭುತವಾಗಿ ಹಾಡಿದ್ದರು. ಇದೀಗ ಅದೇ ಹಾಡನ್ನು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಭಾವನಾತ್ಮಕವಾಗಿ ಹಾಡಿ ಯೂಟ್ಯೂಬ್​ನಲ್ಲಿ ಪ್ರಕಟಿಸಿದ್ದರು. ಇದಕ್ಕೆ ಪ್ರಧಾನಿ ಮೋದಿ ತಲೆದೂಗಿದ್ದಾರೆ.