ಮೇಘಾಲಯ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ಪ್ರಮಾಣ ವಚನ ಸ್ವೀಕಾರ…

38
firstsuddi

ಶಿಲ್ಲಾಂಗ್ : ನ್ಯಾಷನಲ್ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರು ಇಂದು ಮೇಘಾಲಯದ ಮುಖ್ಯಮಂತ್ರಿಯಾಗಿ ಸತತ 2ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಮೇಘಾಲಯದ ರಾಜ್ಯಪಾಲ ಫಾಗು ಚೌಹಾಣ್ ಅವರು ಸಂಗ್ಮಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಶಿಲ್ಲಾಂಗ್ ನ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗವಹಿಸಿದ್ದರು.

ಸಂಗ್ಮಾ ನೇತೃತ್ವದ ಮೇಘಾಲಯದ ಹೊಸ ಸರ್ಕಾರದಲ್ಲಿ ಅವರ ಪಕ್ಷದಿಂದ 8 ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಮಿತ್ರಪಕ್ಷಗಳಿಂದ 4 ಸಚಿವ ಸ್ಥಾನಗಳಿವೆ. ಎನ್‌ಪಿಪಿಯ ಮಿತ್ರ ಪಕ್ಷ ಯುಡಿಪಿ ಇಬ್ಬರು ಸಚಿವರನ್ನು ಹೊಂದಿದ್ದರೆ, ಬಿಜೆಪಿ ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ತಲಾ ಒಬ್ಬೊಬ್ಬರು ಸಚಿವರು ಇದ್ದಾರೆ.

ಇತ್ತೀಚೆಗೆ ನಡೆದ ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಎನ್‌ಪಿಪಿ 26 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿದೆ. ಯುಡಿಪಿ 11 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ, ಹೆಚ್‌ಎಸ್‌ಪಿಡಿಪಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ತಲಾ 2 ಸ್ಥಾನಗಳನ್ನು ಪಡೆದಿವೆ.