ಮೈಸೂರು : ಮೈಸೂರು ವಿವಿ ಬಂಗಾರ ಪದಕ ವಿಜೇತೆ ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಡೇನಹಳ್ಳಿ ನಿವಾಸಿಯಾಗಿರುವ ಆಶಾ, ಎಂಟು ವರ್ಷಗಳ ಹಿಂದೆ ಮಳವಳ್ಳಿಯ ನಾಗಪ್ರಸಾದ್ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ನಂತರ ನಗರದ ಜೆ.ಪಿ.ನಗರದಲ್ಲಿ ದಂಪತಿ ವಾಸವಾಗಿದ್ದರು. ಆಶಾಗೆ ಹಣ ತೆಗೆದುಕೊಂಡು ಬರುವಂತೆ ಗಂಡ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಎರಡ್ಮೂರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣ ಡೈವೋರ್ಸ್ ಹಂತಕ್ಕೆ ಹೋಗಿತ್ತು. ನಂತರ ಕುಟುಂಬ ನ್ಯಾಯಾಲಯದಲ್ಲಿ ಅವರಿಬ್ಬರಿಗೆ ರಾಜಿ ಮಾಡಿಸಲಾಗಿತ್ತು. ಇದಾದ ಮೇಲೂ ನಾಗಾಪ್ರಸಾದ್ ನಿರಂತರವಾಗಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದನಂತೆ.
ಆಶಾ ನಿನ್ನೆಯಷ್ಟೆ ಗಂಡನ ಮನೆ ಬಿಟ್ಟು ಪಿಜಿಯಲ್ಲಿ ಇರುತ್ತೇನೆ ಎಂದು ಹೇಳಿದ್ದರು. ಆದರೆ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಗಾಪ್ರಸಾದ್ ಆಶಾ ಕುಟುಂಬಸ್ಥರಿಗೆ ಹೇಳಿದ್ದಾನೆ. ಆದರೆ ಆಶಾ ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.










