ಚಂಡೀಗಢ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಉಂಟಾದ ಪ್ರಕರಣದ ತನಿಖೆ ನಡೆಸಲು ಪಂಜಾಬ್ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ಘಟನೆ ಸಂಬಂಧ ತನಿಖೆ ಮಾಡಲು ರಚಿಸಲಾದ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಮೆಹ್ತಾಬ್ ಸಿಂಗ್ ಗಿಲ್, ಗೃಹ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಮತ್ತು ನ್ಯಾಯಮೂರ್ತಿಯಾದ ಅನುರಾಗ್ ವರ್ಮಾ ಇರುತ್ತಾರೆ. ಈ ತನಿಖಾ ಸಮಿತಿಯು ಮೂರು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಪಂಜಾಬ್ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿನ್ನೆ ಪಂಜಾಬ್ ನ ಫಿರೋಜ್ ಪುರದಲ್ಲಿ ಆಯೋಜನೆಗೊಂಡಿದ್ದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಕೆಲ ಪ್ರತಿಭಟನಾಕಾರರು ರಸ್ತೆಯನ್ನು ಅಡ್ಡಗಟ್ಟಿದ್ದರು. ಈ ವೇಳೆ ಮೋದಿ ಫ್ಲೈಓವರ್ ನಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಬಳಿಕ ರ್‍ಯಾಲಿಯಲ್ಲಿ ಭಾಗಿಯಾಗದೇ ಪ್ರಧಾನಿ ದೆಹಲಿಗೆ ವಾಪಸ್ ಆಗಿದ್ದರು. ಇದೊಂದು ದೊಡ್ಡ ಭದ್ರತಾ ಲೋಪ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿತ್ತು.










