ಬೆಂಗಳೂರು : ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ!. ಒಬ್ಬ ಶಾಸಕರದ್ದೇ ಈ ಪರಿ ಲೂಟಿ ಇರುವಾಗ ಮಂತ್ರಿಗಳ ಲೂಟಿ ಇನ್ನೆಷ್ಟು?. ಇಂದು ಅಮಿತ್ ಶಾ ಬರುತ್ತಿರುವುದಕ್ಕೂ, ಈ ನಿಧಿ ಸಂಗ್ರಹಕ್ಕೂ ಸಂಬಂಧವಿದೆಯೇ?. ಅಮಿತ್ ಶಾ ಬರುತ್ತಿರುವುದೇ ಇಲ್ಲಿನ ‘ಸಂಪತ್ತು’ ಕೊಂಡೊಯ್ಯುವುದಕ್ಕಾ ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಶಾಸಕರ ಮನೆಯಲ್ಲಿ ಸಿಕ್ಕ ಹಣದ ರಹಸ್ಯವೇನು ಬಿಜೆಪಿ?. ಈ ಹಣ #PayCM ಗೆ ತಲುಪಿಸುವುದಕ್ಕಾ ಅಥವಾ #PayCM ಗೆ ತಲುಪಿಸುವುದಕ್ಕಾ?. ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಮೋದಿ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ?. ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ?
“ನಾ ಖಾವುಂಗಾ, ನಾ ಖಾನೆದುಂಗಾ” ಎನ್ನುವ ನರೇಂದ್ರ ಮೋದಿ ಅವರೇ, ಇಲ್ಲಿರುವುದು ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಲೂಟಿಯ ಸರ್ಕಾರ. ನಿಮ್ಮವರ ಲೂಟಿ ಸಾಧನೆಯನ್ನು ಕಣ್ತುಂಬಿಕೊಳ್ಳಲೆಂದೇ ಕರ್ನಾಟಕಕ್ಕೆ ತಿಂಗಳಿಗೆ ಮೂರು ಬಾರಿ ಬರುತ್ತಿರುವಿರಾ? “ಶಬಾಷ್” ಎಂದು ಬಿಜೆಪಿ ಭ್ರಷ್ಟರ ಬೆನ್ನು ತಟ್ಟಿ ಹೋಗುವಿರಾ? ಕಮಿಷನ್ ಲೂಟಿಯ ಹಣ ಇಡಲು ಮನೆಗಳು ಸಾಲದೆ ಬಿಜೆಪಿಗರು ದೊಡ್ಡ ದೊಡ್ಡ ಗೋಡೌನ್ ಗಳನ್ನೇ ಕಟ್ಟಿಸಿರುವಂತಿದೆ.
ಒಬ್ಬೊಬ್ಬರಲ್ಲೂ ಲಾರಿಯಲ್ಲಿ ಲೋಡ್ ಮಾಡುವಷ್ಟು ಭ್ರಷ್ಟ ಹಣ ತುಂಬಿ ತುಳುಕುತ್ತಿದೆ. ಹೀಗಿದ್ದರೂ ಬಿಜೆಪಿಗರತ್ತ ಸುಳಿಯದ ಐಟಿ, ಇಡಿ, ಸಿಬಿಐಗಳು ಬಾಳೆಹಣ್ಣಿನ ಸಿಪ್ಪೆ ತೆಗೆಯುತ್ತಿವೆಯೇ ಅಮಿತ್ ಶಾ ಅವರೇ? ಭ್ರಷ್ಟಾಚಾರವೇ ಬಿಜೆಪಿಯ ಭರವಸೆ! ನಾವು ಹಿಂದೆಯೂ ಹೇಳಿದ್ದೇವೆ ಮುಂದೆಯೂ ಹೇಳುತ್ತೇವೆ. ಬಿಜೆಪಿ ನೀಡುವ ಭರವಸೆ 40% ಕಮಿಷನ್, ಅಕ್ರಮ, ಹಗರಣ, ಭ್ರಷ್ಟಾಚಾರ ಮಾತ್ರ ಎಂದು ಕಾಂಗ್ರೆಸ್ ಹೇಳಿದೆ.
ಕಮಿಷನ್ ಲೂಟಿಗೆ ದಾಖಲೆ ಕೇಳುವ ಬಸವರಾಜ್ ಬೊಮ್ಮಾಯಿ ಅವರೇ, ದಾಖಲೆಗಳು ಕಂತೆ ಕಂತೆಯಾಗಿ ಸಿಕ್ಕಿವೆ ನೋಡಿ. ಈಗ ಕಮಿಷನ್ ಆರೋಪ ಒಪ್ಪುವಿರಾ? ಚುನಾವಣೆ ಖರ್ಚಿಗಾಗಿ ಬಿಜೆಪಿಯ #ElectionCollection ಬಿರುಸಿನಿಂದ ಸಾಗಿದೆ. ಅಧಿಕಾರಾವಧಿ ಮುಗಿಯುತ್ತಿದೆ, ಮತ್ತೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಬಕಾಸುರನಂತೆ ದೋಚಿ ಬಾಚುತ್ತಿದೆ ಎಂದು ಆರೋಪಿಸಿದೆ.
ಕರ್ನಾಟಕವನ್ನು ಲೂಟಿ ಹೊಡೆದು ಕೇಂದ್ರದ ನಾಯಕರಿಗೆ ಕಪ್ಪ ಕಾಣಿಕೆ ನೀಡುವುದಷ್ಟೇ ಇವರ ಭರವಸೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆ ಈ ಪ್ರಕರಣವನ್ನು ಲೋಕಾಯುಕ್ತ ನೋಡಿಕೊಳ್ಳುತ್ತದೆ ಎಂದಿರುವ ಬೊಮ್ಮಾಯಿ ಅವರೇ, ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ನಿಮ್ಮ ಕೊಡುಗೆ, ಬದ್ಧತೆ ಏನು? ಈ ಹಿಂದೆಯೇ ಕಮಿಷನ್ ವಿಚಾರವನ್ನು ತನಿಖೆಗೆ ವಹಿಸದೆ ಬಂಡ ಸಮರ್ಥನೆಗೆ ಇಳಿದಿದ್ದೇಕೆ?. ಆರೋಪ ಮಾಡಿದವರ ಮೇಲೆಯೇ ಮುಗಿಬಿದ್ದಿದೇಕೆ ಎಂದಿದೆ.










