ಯಡಿಯೂರಪ್ಪ ವಿಜಯೇಂದ್ರರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ: ಸಿಎಂ ಸಿದ್ದರಾಮಯ್ಯ.

26

ಮೈಸೂರು: ಬಿಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿವೈ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡುವ ಮೂಲಕ ರಾಜ್ಯದ ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ ನೀಡುವ ಹೇಳಿಕೆಗಳನ್ನು ನೀವು ಯಾಕೆ ಮಾಧ್ಯಮಗಳಲ್ಲಿ ತೋರಿಸುತ್ತೀರಿ ಎಂದು ಪ್ರಶ್ನಿಸಿದರು. ಇದೇ ಯಡಿಯೂರಪ್ಪ ಹಿಂದೆ ತಾವು ಸಿಎಂ ಆಗಿದ್ದಾಗ ಕಾಂಗ್ರೆಸ್ ಸರ್ಕಾರ ಬಡವರಿಗೆ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರು. ಪರಿಸ್ಥಿತಿ ಹೀಗಿರುವಾಗ ವಿಜಯೇಂದ್ರ ಯಾವ ನೈತಿಕತೆಯಿಂದ ಬಡವರ ಅಕ್ಕಿ ಬಗ್ಗೆ ಮಾತಾಡುತ್ತಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್ ಕೊಡುವುದು ಬೇಡ ಎಂದು ನಿಯಮಾವಳಿ, ಮಾರ್ಗಸೂಚಿ ರಚಿಸಿದ್ದೇ ಬಿಜೆಪಿ ಸರ್ಕಾರ. ಈಗ ಇವರೇ ಪ್ರತಿಭಟನೆ ಅಂತ ಫೋಟೋ ತೆಗೆಸಿಕೊಳ್ತಾ ಇದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.