ಯತ್ನಾಳ್ – ನಿರಾಣಿ ವಿರುದ್ಧ ಕೇಸ್ ದಾಖಲಿಸಿ : ಗೃಹ ಸಚಿವರಿಗೆ ಡಿಕೆಶಿ ಒತ್ತಾಯ…

58
firstsuddi

ಬಾಗಲಕೋಟೆ : ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರಸ್ಪರ ಆರೋಪ ಪತ್ಯಾರೋಪ ಮಾಡ್ತಾ ಇದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೊಲೆ ಪ್ರಕರಣದ ಬಗ್ಗೆ ಇಬ್ಬರು ನಾಯಕರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಗೃಹ ಸಚಿವರು ಸ್ವಯಂ ಪ್ರೇರಿತ ಕೇಸ್ ಹಾಕಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

ನಗರದಲ್ಲಿ ನಡೆಯುವ ಪ್ರಜಾಧ್ವನಿ ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಪಿ ನಾಯಕರೇ ಬಿಜೆಪಿ ಪಕ್ಷದ ಸಂಸ್ಕೃತಿ, ಅವರ ಧರ್ಮ, ಬಿಜೆಪಿ ನೀತಿ, ಬಿಜೆಪಿ ಸಿದ್ದಾಂತದ ಬಗ್ಗೆ ಹೇಳುತ್ತಿದ್ದಾರೆ. ಶಾಸಕ ಯತ್ನಾಳ್ ವಿರುದ್ಧ ಸಚಿವರೊಬ್ಬರು ಕೊಲೆ ಕೇಸ್ ಆರೋಪ ಮಾಡಿದ್ದಾರೆ. ಸಚಿವರೇ ಹೇಳಿದರೂ ಸಹ ಯಾಕೆ ಹೋಮ್ ಮಿನಿಸ್ಟರ್ ಇನ್ನೂ ಎಫ್ಐಆರ್ ಹಾಕ್ತಿಲ್ಲ. ಕೂಡಲೇ ಸುಮೋಟೋ ಎಫ್ಐಆರ್ ಹಾಕಿ ತನಿಖೆ ನಡೆಸಲಿ ಅಂತಾ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.

ಮುರುಗೇಶ್ ನಿರಾಣಿಯನ್ನ ಶಾಸಕ ಯತ್ನಾಳ್ ಪಿಂಪ್ ಅಂತ ಕರೀತಾರೆ, ಯಾರ ಜೊತೆ ವಹಿವಾಟು ನಡೀತು, ಏನೇನು ವ್ಯವಹಾರ ಮಾಡಿದರು ಅನ್ನೋದೆಲ್ಲವೂ ಹೊರಗೆ ಬರಬೇಕು. ಶಾಸಕ ಯತ್ನಾಳ್, ಯೂನಿಯನ್ ಮಿನಿಸ್ಟರ್ ಆಗಿದ್ದವರು. ಸ್ಯಾಂಟ್ರೋ ರವಿ ಕೇಸ್ ತಗೊಂಡ ಹಾಗೆ ಅದನ್ನೂ ಒಂದು ಕೇಸ್ ತಗೋಬಹುದಿತ್ತಲ್ವಾ. ಇದನ್ನೆಲ್ಲಾ ನಾವು ಮಾಡ್ತಿರೋ ಆರೋಪಗಳಲ್ಲ. ಅವರ ಬಾಯಿಂದ ಬಂದ ನುಡಿ ಮುತ್ತುಗಳು. ಯತ್ನಾಳ್ ಹಾಗೂ ನಿರಾಣಿ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲಿ ಎಂದರು.

ಪ್ರಜಾಧ್ವನಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, ನಾನು ದಕ್ಷಿಣ ಭಾಗದಲ್ಲಿ ಪ್ರಚಾರ ನಡೆಸುತ್ತೇನೆ, ಅವರು ದಕ್ಷಿಣ ಭಾಗಕ್ಕೆ ಹೋಗುತ್ತಾರೆ. ‘ನಾ ನಾಯಕಿ’ ಸಮಾವೇಶದಲ್ಲಿ ಮಹಿಳೆಯರು ನೋವು ತೋಡಿಕೊಂಡಿದ್ದಾರೆ. ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೇರವಾಗಿ ಅವರ ಅಕೌಂಟ್ ಗೆ ಹಾಕುತ್ತೇವೆ. ಅಲ್ಲದೆ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ. ಈ ಸರ್ಕಾರ ಬೆಲೆ ಏರಿಕೆ ಮಾಡಿ, ಸಾಮಾನ್ಯ ಜನರಿಗೆ ಹೊರೆಯಾಗಿದೆ. ಬಸವಣ್ಣನ ನಾಡಿನಲ್ಲಿ ಇದ್ದೇವೆ, ನಾವು ಮಾತುಕೊಟ್ಟಂತೆ ನಡೆಯುತ್ತೇವೆ ಎಂದು ಹೇಳಿದರು.

ಮುಂದಿನ ತಿಂಗಳ 2ರಂದು ಬೆಂಗಳೂರಿನಲ್ಲಿ ಸ್ಟೇಟ್ ಎಲೆಕ್ಷನ್ ಕಮಿಟಿ ಸಭೆ ನಡೆಸಲಾಗುತ್ತದೆ. ಆ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಬಗ್ಗೆ ಚರ್ಚೆ ಮಾಡುತ್ತೇವೆ. ಸಿದ್ದರಾಮಯ್ಯ ತಮ್ಮ ಸ್ಪರ್ಧೆ ಕುರಿತು ಈಗಾಗಲೇ ನಮಗೆ ನೇರವಾಗಿ ಹೇಳಿದ್ದಾರೆ. ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸೋದಾಗಿ ಹೇಳಿದ್ದಾರೆ. ಅಲ್ಲದೆ ಒಂದೇ ಕಡೆಗೆ ಅವರು ಅರ್ಜಿ ಹಾಕಿದ್ದಾರೆ. ಪಕ್ಷ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೆ ಎಂದರು.