ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅನಾರೋಗ್ಯದಿಂದ ಸಾವು…

553
firstsuddi

ಗದಗ : ರಜೆ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ. ವೀರಪ್ಪ ತಹಶೀಲ್ದಾರ(35) ಮೃತ ಯೋಧ ಎಂದು ಗುರುತಿಸಲಾಗಿದ್ದು, ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು, ಬಳಿಕ ಕೊರೊನಾ ವೈರಸ್ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದ ಹಿನ್ನೆಲೆ, ಜಿಲ್ಲಾಡಳಿತ ಅಂತ್ಯಸಂಸ್ಕಾರ ನಡೆಸಲು ಅನುಮತಿ ನೀಡಿದ ಬಳಿಕ ಮೃತ ಯೋಧರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. 2006ರಲ್ಲಿ ಭಾರತೀಯ ಸೇನೆಗೆ ಸೇರಿಕೊಂಡ ಇವರು ಪಶ್ಚಿಮ ಬಂಗಾಳದ 158ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ವೀರಪ್ಪ ಅವರು ರಜೆ ಮೇಲೆ ತಮ್ಮ ಸ್ವಗ್ರಾಮವಾದ ಶ್ಯಾಗೋಟಿ ಗ್ರಾಮಕ್ಕೆ ಬಂದಿದ್ದು, ಏಪ್ರಿಲ್ 15ರಂದು ಅವರ ರಜಾ ಅವಧಿ ಮುಗಿದಿತ್ತು. ಆದರೆ ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಲಾಕ್‍ಡೌನ್ ಆಗಿರುವುದರಿಂದ ಯೋಧ ತಮ್ಮ ಗ್ರಾಮದಲ್ಲೇ ಉಳಿದುಕೊಂಡಿದ್ದರು.