ರಾಮನಗರ ಜೈಲಿನಲ್ಲಿ ಇರಿಸಲಾಗಿರುವ ಕೈದಿಗಳನ್ನು ತಕ್ಷಣವೇ ಸ್ಥಳಾಂತರಿಸದಿದ್ದರೆ ನಾಳೆಯಿಂದ ಉಗ್ರ ಪ್ರತಿಭಟನೆ ಮಾಡುತ್ತೇನೆ : ಹೆಚ್.ಡಿ. ಕುಮಾರಸ್ವಾಮಿ.

187
firstsuddi

ಬೆಂಗಳೂರು : ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರದ ಗಲಭೆ ಪ್ರಕರಣದ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಸರ್ಕಾರ ಕೂಡಲೇ ಆರೋಪಿಗಳನ್ನು ರಾಮನಗರದಿಂದ ಸ್ಥಳಾಂತರ ಮಾಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ಪಾದರಾಯನಪುರದ ಗಲಭೆಕೋರರ ಪೈಕಿ ಇಬ್ಬರಿಗೆ ಕೊರೋನಾ ವೈರಸ್ ತಗುಲಿರುವ ಪಾಸಿಟಿವ್ ವರದಿ ಬಂದಿದೆ. ರಾಮನಗರ ಜೈಲಿನಲ್ಲಿ ಇರಿಸಲಾಗಿರುವ ಕೈದಿಗಳನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣವೇ ಸ್ಥಳಾಂತರಿಸದಿದ್ದರೆ ನಾಳೆಯಿಂದ ಉಗ್ರ ಪ್ರತಿಭಟನೆ ಮಾಡುತ್ತೇನೆ. ಈ ಹಿಂದೆಯೇ ನಾನು ಇದೇ ವಿಷಯವಾಗಿ ಸರ್ಕಾರದ ಗಮನ ಸೆಳೆದರೂ ನಿರ್ಲಕ್ಷಿಸಿದರ ಫಲವಾಗಿ ಇಂದು ರಾಮನಗರಕ್ಕೂ ಕೊರೋನಾ ವೈರಸ್ ವಕ್ಕರಿಸಿದೆ. ಪಾಸಿಟಿವ್ ಬಂದ ಇಬ್ಬರ ಜತೆಯಲ್ಲಿದ್ದ ಏಳೆಂಟು ಮಂದಿಯನ್ನು ಕ್ವಾರಂಟೈನ್ಗೆ ಕರೆದೊಯ್ಯಲಾಗಿದೆ. ಸರ್ಕಾರ ತಡಮಾಡದೆ ರಾಮನಗರ ಜೈಲಿನಲ್ಲಿರುವ ಕೈದಿಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಸರ್ಕಾರದ ಅವಿವೇಕದ ನಿರ್ಧಾರದಿಂದಾಗಿ ರಾಮನಗರ ಜಿಲ್ಲೆಯ ಜನ ಭೀತಿಗೊಂಡಿದ್ದಾರೆ. ಇದನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ.
ಈಗಾಗಲೇ ರಾಜ್ಯದಲ್ಲಿ 445 ಮಂದಿ ಸೋಂಕಿಗೆ ತುತ್ತಾಗಿ, 17 ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಎಂಟು ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿವೆ. ಅವುಗಳಲ್ಲಿ ರಾಮನಗರವೂ ಒಂದು. ಇದೀಗ ಸರ್ಕಾರ ತೆಗೆದುಕೊಂಡ ಎಡವಟ್ಟು ನಿರ್ಧಾರದಿಂದ ರಾಮನಗರದಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ. ಸರ್ಕಾರ ಸಕಲ ಮುನ್ನೆಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ರಾಮನಗರ ಜೈಲ್ ಅನ್ನು ಸಂಪೂರ್ಣ ಕ್ವಾರಂಟೈನ್ ಮಾಡಬೇಕು. ಪೊಲೀಸರು ಸೇರಿದಂತೆ ಜೈಲಿನಲ್ಲಿ ಕಾರ್ಯನಿರ್ವಹಿಸಿದ ಅಡುಗೆ ಮತ್ತು ಸ್ವಚ್ಛತೆ ಯವರು ಸಂಬಂಧಿಸಿದವರ ಆರೋಗ್ಯ ಕಾಪಾಡಲು ಸರ್ಕಾರ ತಕ್ಷಣವೇ ಕಾರ್ಯೋನ್ಮುಖವಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ,