ನವದೆಹಲಿ : ರಷ್ಯಾ ಅಭಿವೃದ್ಧಿಪಡಿಸಿರುವ ‘ಸ್ಫುಟ್ನಿಕ್ ವಿ’ ಲಸಿಕೆ ತಯಾರಿಕೆಗೆ ಅನುಮತಿ ಕೋರಿ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಡ್ರಗ್ ಕಂಟ್ರೋಲರ್ ಜನರಲ್ ಆಪ್ ಇಂಡಿಯಾ (ಡಿಸಿಜಿಐ) ಗೆ ಇಂದು ಅರ್ಜಿ ಸಲ್ಲಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಪುಣೆ ಮೂಲದ ಸಂಸ್ಥೆಯಾಗಿರುವ ಸೀರಮ್ ಸಂಸ್ಥೆ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲೂ ಅನುಮತಿ ಕೋರಿದ್ದು, ಲಸಿಕೆಯ ತಯಾರಿಕೆ ಮಾತ್ರವಲ್ಲದೇ ವಿಶ್ಲೇಷಣೆ ಮತ್ತು ಪರೀಕ್ಷೆಗೆ ಪರೀಕ್ಷಾ ಪರವಾನಗಿಯನ್ನು ಸಹ ಕೋರಿದೆ. ಡಿಸಿಜಿಐ ಅನುಮತಿ ಮೇರೆಗೆ ಈಗಾಗಲೇ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಸ್ತುತ ಭಾರತದಲ್ಲಿ ಹೈದರಾಬಾದ್ ನ ಡಾ. ರೆಡ್ಡಿ ಲ್ಯಾಬೋರೇಟರಿ ತಯಾರಿಸುತ್ತಿದೆ.
ಈಗಾಗಲೇ ದೇಶದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿರುವ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಜೂನ್ ನಲ್ಲಿ 10 ಕೋಟಿ ಕೋವಿಶೀಲ್ಡ್ ಡೋಸ್ ಗಳನ್ನು ತಯಾರಿಸಲು ಮತ್ತು ಪೂರೈಸಲು ಸಾಧ್ಯವಾಗುತ್ತದೆ ಎಂದು ಈಗಾಗಲೇ ಸರ್ಕಾರಕ್ಕೆ ತಿಳಿಸಿದೆ. ಇದಲ್ಲದೇ ಅಮೆರಿಕ ಮೂಲದ ನೊವಾವಾಕ್ಸ್ ಕಂಪನಿ ಜೊತೆ ಸೇರಿ ‘ಕೊವೊವಾಕ್ಸ್’ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಲ್ಲಿ ತೊಡಗಿದೆ.










