ನ್ಯೂಯಾರ್ಕ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಇಂದಿಗೆ 1 ವರ್ಷವಾಗಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಮತ್ತು ತಕ್ಷಣ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ರಷ್ಯಾವನ್ನು ಒತ್ತಾಯಿಸುವ ನಿರ್ಣಯಕ್ಕೆ ಸಂಬಂಧಿಸಿದಂತೆ ಮತ ಚಲಾಯಿಸಲಾಯಿತು.
ಉಕ್ರೇನ್ ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಕುರಿತಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ(ಯುಎನ್ ಜಿಎ) ನಿರ್ಣಯದ ಮೇಲೆ ಭಾರತ ಮತದಾನದಿಂದ ದೂರ ಉಳಿದಿದೆ. ಯುಎನ್ ಜಿಎಯಲ್ಲಿ ನಿನ್ನೆ ನಡೆದ ಐತಿಹಾಸಿಕ ಮತದಾನದಲ್ಲಿ ಉಕ್ರೇನ್ ನ ಮೇಲಿನ ಆಕ್ರಮಣಕ್ಕಾಗಿ ರಷ್ಯಾವನ್ನು ಬಹುತೇಕ ದೇಶಗಳು ಖಂಡಿಸಿವೆ.
ಅಸೆಂಬ್ಲಿಯಲ್ಲಿ 193-ಸದಸ್ಯ ರಾಷ್ಟ್ರಗಳಲ್ಲಿ ನಿರ್ಣಯದ ಪರವಾಗಿ 141 ರಾಷ್ಟ್ರಗಳು ಮತ ಚಲಾಯಿಸಿದವು. ಚೀನಾ ಮತ್ತು ಭಾರತ ಸೇರಿದಂತೆ 32 ದೇಶಗಳು ಮತ ಹಾಕದೇ ತಮ್ಮ ತಟಸ್ಥ ನಿಲುವನ್ನು ತೋರ್ಪಡಿಸಿಕೊಂಡಿದೆ. ರಷ್ಯಾ ಸೇರಿದಂತೆ 7 ದೇಶಗಳು ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದವು.
ರಷ್ಯಾ ಹಾಗೂ ಉಕ್ರೇನ್ ಆದಷ್ಟು ಬೇಗ ಸಂಘರ್ಷವನ್ನು ಕೊನೆಗೊಳಿಸಿ, ಮಾತುಕತೆ ನಡೆಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಭಾರತ ತಿಳಿಸಿದೆ.
ಶಾಂತಿಯುತವಾಗಿ ಮಾತುಕತೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ರಷ್ಯಾ ಹಾಗೂ ಉಕ್ರೇನ್ಗೆ ಪಾಠ ಹೇಳಲು ಮುಂದಾಗಿದೆ. ಎಲ್ಲಾ ಸಮಸ್ಯೆಗಳಿಗೂ ಅಣ್ವಸ್ತ್ರವೇ ಮುಖ್ಯವಲ್ಲ. ಅಸ್ತ್ರಗಳನ್ನು ಕಳುಹಿಸುವುದರಿಂದ ಶಾಂತಿಯನ್ನು ಕಾಪಾಡಲು ಸಾಧ್ಯವಿಲ್ಲ. ಇದು ಯುದ್ಧಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತದೆ ಎಂದು ಚೀನಾ ವಿಶ್ವಸಂಸ್ಥೆಗೆ ತಿಳಿಸಿದೆ.










