ಗಿರಿದಿಹ್: ವೇಗವಾಗಿ ಬಂದ ಎಸ್‌ಯುವಿ ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ನಡೆದಿದೆ.
ಮುಫಸ್ಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗ್ಮಾರಾದಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ನಡೆದಿದೆ.
ಗಿರಿದಿಹ್ ಸದರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅನಿಲ್ ಸಿಂಗ್ ಮಾತನಾಡಿ, ಕಾರಿನಲ್ಲಿದ್ದವರು ಬಿರ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಥೋರಿಯಾ ಗ್ರಾಮದಿಂದ ಸುಮಾರು 40 ಕಿಮೀ ದೂರದಲ್ಲಿರುವ ಟಿಕೋಡಿಹ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು ಮತ್ತು ಅಪಘಾತ ಸಂಭವಿಸಿದಾಗ ಮನೆಗೆ ಹಿಂದಿರುಗುತ್ತಿದ್ದರು.
ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಉಳಿದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.










