– ಡಾ.ಎಂ.ಎಸ್.ಮಣಿ
ಭೋಧಗಯ, ಲುಂಬಿನಿ, ಸಾರನಾಥ, ಕುಶಿನಗರ ಬುದ್ಧನ ಅನುಯಾಯಿಗಳಿಗೆ ಪ್ರಮುಖ ಭಕ್ತಿ ಕೇಂದ್ರ. ಉತ್ತರಪ್ರದೇಶದಲ್ಲಿರುವ ಕುಶಿನಗರದಲ್ಲಿ ಮಲಗಿರುವ ‘ಸಾರನಾಥ’ ದೇಶ ವಿದೇಶಗಳ ಭಕ್ತರನ್ನು, ಪ್ರವಾಸಿಗರನ್ನು ಸೆಳೆದಿದೆ. ಬುದ್ಧನ ಶರೀರವು ಇಲ್ಲಿ ವಿಶ್ರಾಂತವಾಗಿದೆ ಎಂದು ಪ್ರಾಚೀನ ಬ್ರಾಹ್ಮಿ ಭಾಷೆಯಲ್ಲಿ ಶಾಸನವನ್ನು ಕೆತ್ತಲಾಗಿದೆ. ಇಲ್ಲಿನ ಮುಖ್ಯ ಸ್ವರೂಪವನ್ನು 1876ರಲ್ಲಿ ಕಾರ್ಲೆಯಿಲ್‍ನಲ್ಲಿ ನಿರ್ಮಿಸಲಾಯಿತು. 1927ರಲ್ಲಿ ಈ ಸ್ಥೂಪವನ್ನು ಪುನರ್ ಸ್ಥಾಪಿಸಲಾಯಿತು. ಇಂತಹ ವಿಶೇಷತೆಯುಳ್ಳ, ಜಗತ್ತಿಗೆ ಶಾಂತಿ ಮಂತ್ರ ಜಪಿಸಿದ ಉತ್ತರಪ್ರದೇಶದ ಪೂರ್ವ ಭಾಗದ ವಾರಣಾಸಿ, ಚಂದೌಲಿ, ಮಿರ್ಜಾಪುರ ಹಾಗೂ ಗಾಜಿಪುರ ಜಿಲ್ಲೆಗಳಿಂದ ಸೋಮವಾರ ರಾತ್ರಿ ಮತಯಂತ್ರಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದ ವಿಡಿಯೋ ತುಣಕು ವೈರಲ್ ಆಗಿವೆ ಎಂಬ ಸುದ್ದಿ ಹರಡಿತು. ಎಸ್‍ಪಿ – ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿ ಅಫ್ಜಲ್ ಅನ್ಸಾರಿ ಇವಿಎಂಗಳನ್ನು ರಾತ್ರಿ ವೇಳೆಯಲ್ಲಿ ಹೊರ ಸಾಗಿಸುತ್ತಿದ್ದಾರೆಂದು ಪ್ರತಿಭಟನೆ ಕೂಡ ನಡೆಸಿದ್ದರು. ಇದು ಸತ್ಯವಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿತು.
50ರ ದಶಕದ ಅಂತ್ಯದಲ್ಲೂ ಬಿಹಾರದ ವೈಶಾಲಿಯಲ್ಲಿ ಇಂತಹದ್ದೊಂದು ಆರೋಪ ಎದ್ದಿತ್ತು. ದೇಶದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಪ್ರಕರಣ ಇರಬೇಕು. ಅದು 1957ರ ಚುನಾವಣೆ. ಬೇಗುಸರಯ್‍ನಲ್ಲಿಯೇ ಮೊಟ್ಟಮೊದಲ ಬಾರಿಗೆ ಬಂದೂಕು-ಬಾಂಬು-ಮದ್ದು ಸಂಸ್ಕøತಿ ಪರಿಚಯವಾಯಿತು. 1970 ರ ದಶಕದಲ್ಲಿ ಇದಕ್ಕೆ ‘ಬೂತ್ ಅಪಹರಣ’ ಎಂಬ ನಾಮಾಂಕಿತದಲ್ಲಿ ಕುಖ್ಯಾತಿ ಪಡೆಯಿತು. ಇದು ನಿಧಾನವಾಗಿ ದೇಶಾದ್ಯಂತ ಪರಿಚಯ ಆಯಿತು. ‘ಬೂತ್ ಅಪಹರಣ’ ಮಾಡುವ ನಿಪುಣರು ಸೃಷ್ಟಿಯಾದರು. ವೃತ್ತಿಪರವಾಗಿ ಕೆಲವರು ಬದಲಾದರು. ಇವರಿಗೆ ಯಾವುದೇ ಸಿದ್ಧಾಂತವೂ ಇರಲಿಲ್ಲ. ರಾಜಕೀಯ ಪಕ್ಷಗಳಿಂದ ಸುಪಾರಿ ಪಡೆದ ಅಪಹರಣಕಾರರಾಗಿದ್ದರು. ಇವರಿಗೆ ಹಣವಷ್ಟೇ ಮುಖ್ಯ. ಬೂತ್ ಅಪಹರಿಸುತ್ತಿದ್ದವರೇ ಮುಂದೆ ಜಾತಿ ಆಧಾರಿತ ಸಂಘಟನೆ, ಭಾಷೆ ಆಧಾರಿತ ಸಂಘಟನೆಗಳನ್ನು ಸೇರಿ ‘ಸಮಾಜ ಸೇವಕ’ ಮುಖವಾಡ ಧರಿಸಿ ನಮ್ಮ ಜನಪ್ರತಿನಿಧಿಗಳಾಗುವ ಮಟ್ಟಕ್ಕೂ ಬೆಳೆದುಬಿಟ್ಟರು.
ಇದಿರಲಿ, ನಮ್ಮ ಸಂಸದೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆ ‘ತಾಕತ್ತು’ ಎಂದರೇನು? ಎಂಬ ಪ್ರಶ್ನೆ ಕಾಡುತ್ತಿದೆ. “ಕುಣಿಯುವುದಕ್ಕೆ ಬಾರದವ ನೆಲ ಸರಿಯಿಲ್ಲ ಎಂಬಂತೆ ತಾಕತ್ತಿಲ್ಲದ ವಿರೋಧ ಪಕ್ಷಗಳು ಇವಿಎಂ ಮೇಲೆ ಸಂಶಯ ಪಡುತ್ತಿವೆ’ ಎಂದು ಉಡುಪಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ 2009 ರಲ್ಲಿ ಭಾಜಪ ಚುನಾವಣೆಯನ್ನು ಬ್ಯಾಲೆಟ್ ಪೇಪರ್‍ನಲ್ಲಿಯೇ ನಡೆಸಬೇಕೆಂದು ಏಕೆ ಹಟ ಹಿಡಿಯಿತು? ‘ಡೆಮೊಕ್ರಸಿ ಇನ್ ಡೇಂಜರಸ್’ ಎಂಬ ಪುಸ್ತಕವನ್ನು ಏಕೆ ಪ್ರಕಟಿಸಿತು? ಈ ಸಂದರ್ಭದಲ್ಲಿ ಅಂದರೆ 2010 ರ ಅಕ್ಟೋಬರ್‍ನಲ್ಲಿ ಚುನಾವಣಾ ಆಯೋಗ ಸರ್ವಪಕ್ಷ ಸಭೆಯನ್ನು ಕರೆಯಿತು. ವಿವಿ ಪ್ಯಾಟ್ (ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್) ಅನ್ನು ಪರಿಚಯಿಸಿತು. ದೇಶದ ಪ್ರತಿಷ್ಠಿತ ಬಿಇಎಲ್ ಮತ್ತು ಇಸಿಐಎಲ್ ಕಂಪನಿಗಳಿಗೆ ಪ್ರೋಟೋ ಟೈಪ್ ಯಂತ್ರವನ್ನು ತಯಾರಿಸಿಕೊಡಲು ಕೋರಲಾಯಿತು. ಐದು ಜನ ಪ್ರೊಫೆಸರ್‍ಗಳನ್ನು ಐದು ವಿಭಿನ್ನ ಐಐಟಿಗಳಿಂದ ಆರಿಸಿ ಅವರಿಗೆ ಮತಯಂತ್ರವನ್ನು ತಯಾರಿಸಲು ಮತ್ತು ಡಿಸೈನ್ ಮಾಡಲು ಜವಾಬ್ದಾರಿ ವಹಿಸಿತು. ತಜ್ಞರ ತಂಡ ಅಂತಿಮಗೊಳಿಸಿದ ಇವಿಎಂಗಳನ್ನು 2011 ರ ಜುಲೈನಲ್ಲಿ ಐದು ವಿಭಿನ್ನ ಪ್ರದೇಶಗಳಲ್ಲಿ ಬಳಸಲಾಯಿತು. ಆಗ ಕಂಡುಬಂದ ಲೋಪದೋಷಗಳನ್ನು ಒಂದು ವರ್ಷದ ಕಾಲಾವಧಿಯಲ್ಲಿ ಸರಿಪಡಿಸಿ ಹಿಂದೆ ಪರೀಕ್ಷೆ ನಡೆಸಿದ ಸ್ಥಳದಲ್ಲೇ ಮರುಪರೀಕ್ಷೆ ನಡೆಸಲಾಯಿತು. ಯಾವುದೇ ಲೋಪದೋಷ ಕಂಡುಬಾರದಿದ್ದರಿಂದ ಬಳಕೆಗೆ ಯೋಗ್ಯ ಎಂಬ ನಿರ್ಣಯಕ್ಕೆ ಬರಲಾಯಿತು.
ಹೀಗಾಗಿ 2013 ರಲ್ಲಿ ಚುನಾವಣಾ ಆಯೋಗ ಸುಪ್ರಿಂ ಕೋರ್ಟ್‍ಗೆ ವಿವಿ ಪ್ಯಾಟ್ ಸಂಬಂಧ ಮಾಹಿತಿ ನೀಡಿತು. ಈ ಸಂಬಂಧ ವಿವಿ ಪ್ಯಾಟ್‍ಗಳನ್ನು ಕೊಳ್ಳಲು ಅಗತ್ಯವಾದ ಹಣಕಾಸನ್ನು ಬಿಡುಗಡೆಗೊಳಿಸಲು ಭಾರತ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ನಿರ್ದೇಶಿಸಿತು. ಇಪ್ಪತ್ತು ಸಾವಿರ ವಿವಿ ಪ್ಯಾಟ್‍ಗಳನ್ನು ಪರಿಶೀಲಿಸಲಾಯಿತು. ಇವು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರಿಂದ 2017 ರಿಂದ ದೇಶದ ಎಲ್ಲಾ ವಿಧಾನಸಭೆ ಚುನಾವಣೆಗಳನ್ನು ವಿವಿ ಪ್ಯಾಟ್‍ಗಳ ಮೂಲಕ ನಡೆಸಲಾಯಿತು. ಇದೀಗ ನಡೆದ ಮಹಾ ಚುನಾವಣೆಗೂ ವಿವಿ ಪ್ಯಾಟ್‍ಗಳನ್ನೇ ಬಳಸಿ ಚುನಾವಣೆ ನಡೆಸಲಾಗಿದೆ.
ಹೀಗಿರುವಾಗ ಇವಿಎಂಗಳ ಮೇಲೆ ಅನುಮಾನ ವ್ಯಕ್ತಪಡಿಸುವ ಮೂಲಕ ಜನರ ತೀರ್ಮಾನಕ್ಕೆ ಎಲ್ಲಾ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅಗೌರವ ತೋರಿಸಿವೆ. ವಿವಿ ಪ್ಯಾಟ್ ಮತಗಳನ್ನು ಎಣಿಸಬೇಕು ಎಂದು 22 ರಾಜಕೀಯ ಪಕ್ಷಗಳು ಚುನಾವಣೆ ಆಯೋಗದ ಮುಂದಿಟ್ಟ ಬೇಡಿಕೆ ಕೂಡ ನ್ಯಾಯಸಮ್ಮತವಾದುದಲ್ಲ. ಈಗ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2004 ಮತ್ತು 2009ರಲ್ಲಿ ಅಧಿಕಾರದಲ್ಲಿದ್ದಾಗ ಇವಿಎಂ ವ್ಯವಸ್ಥೆಯಡಿ ಚುನಾಯಿತಗೊಂಡಿತ್ತು. ಹಾಗೆ ತಿರುಚುವುದೇ ಆಗಿದ್ದರೆ 2014ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಗ ಎನ್‍ಡಿಎ ಸರ್ಕಾರ ಆರಿಸಿ ಬಂದಿತ್ತು. ಇವಿಎಂ ವ್ಯವಸ್ಥೆಯಡಿಯಲ್ಲಿಯೇ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂತು. 21 ಪಕ್ಷಗಳ ನೇತೃತ್ವ ವಹಿಸಿ ಇವಿಎಂ ಪ್ರಶ್ನಿಸಿರುವ ಚಂದ್ರಬಾಬು ನಾಯ್ಡು ಕೂಡ 2014 ರಲ್ಲಿ ಇದೇ ವ್ಯವಸ್ಥೆಯಡಿ ಆಯ್ಕೆಯಾಗಿ ಬಂದಿದ್ದರು. ಅಷ್ಟೇ ಏಕೆ? ಈಗಿನ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನೇತೃತ್ವ ಸರ್ಕಾರ ಕೂಡ ಇದೇ ಇವಿಎಂ ಮೂಲಕ ಅಧಿಕಾರಕ್ಕೆ ಬಂದಿದೆ. ‘ಮತಯಂತ್ರ ತಿರುಚುವ ಪ್ರಯತ್ನ ನಡೆಸಿದರೆ ರಕ್ತಪಾತವಾದೀತು.’ ‘ಎಚ್ಚರವಾಗಿರಿ’, ಅಗತ್ಯ ಬಿದ್ದರೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಿ ಎಂದು ಆರ್‍ಎಲ್‍ಎಸ್‍ಪಿ ಮುಖಂಡ ಉಪೇಂದ್ರ ಕುಶ್ವಾಹ ಕರೆ ನೀಡಿದ್ದಾರೆ. ಮತಯಂತ್ರ ತಿರುಚುವ ವಿಚಾರಕ್ಕೆ ಸಂಬಂಧಿಸಿದಂತೆ ಬರುತ್ತಿರುವ ವರದಿಗಳ ಮೇಲೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಲ್ಲ ಊಹಾಪೋಹಗಳಿಗೂ ತೆರೆ ಎಳೆಯುವಂತೆ ಚುನಾವಣಾ ಆಯೋಗಕ್ಕೂ ಹೇಳಿದ್ದರು. ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ಪ್ರಜಾಪ್ರಭುತ್ವದ ಮೂಲಕ್ಕೆ ಸವಾಲೊಡ್ಡುವ ಯಾವ ಊಹಾಪೋಹಕ್ಕೂ ಅವಕಾಶ ನೀಡಬಾರದು. ಜನರ ತೀರ್ಪು ಪವಿತ್ರವಾದದ್ದು. ಅಲ್ಲಿ ಒಂದಿಷ್ಟು ಸಂದೇಹಕ್ಕೂ ಅಕವಾಶ ಇರಕೂಡದು’ ಎಂದಿದ್ದಾರೆ. ಆಯೋಗದ ವಿಶ್ವಾಸಾರ್ಹತೆಯನ್ನು ಉಳಿಸುವುದು ಅದರ ಸಿಬ್ಬಂದಿಯ ಹೊಣೆ. ಎಲ್ಲ ಊಹಾಪೋಹಗಳಿಗೂ ತೆರೆ ಎಳೆಯಬೇಕೆಂದು ಹೇಳಿದ್ದಾರೆ. ಇದರಿಂದಾಗಿಯೇ ಸೋಲುವ ಸಂದರ್ಭ ಎದುರಾಗುವುದನ್ನು ಅರಿತು ವಿರೋಧ ಪಕ್ಷಗಳೆಲ್ಲವೂ ಸೇರಿ ಮತಯಂತ್ರಗಳತ್ತ ಬೊಟ್ಟು ಮಾಡಿದ್ದಾರೆಂದು ರಾಮ್ ವಿಲಾಸ್ ಪಾಸ್ವಾನ್ ಟೀಕಿಸಿದ್ದಾರೆ.
ಇವಿಎಂ ನ ಮತ್ತೊಂದು ದೊಡ್ಡ ಕೊಡುಗೆಯೆಂದರೆ ಮತಪೆಟ್ಟಿಗೆ ಕಳುವಾದಂತೆ ಇವಿಎಂ ಯಂತ್ರ ಅಪಹರಣ ಆಗಿಲ್ಲ. ಇದರಿಂದ ಮತಪೆಟ್ಟಿಗೆ ಅಪಹರಣಕಾರರು ನಿರುದ್ಯೋಗಿಗಳಾಗುವ ಬದಲು ಚುನಾವಣಾ ಕಾರ್ಯದಲ್ಲಿ ತಲ್ಲೀನಗೊಂಡುಬಿಟ್ಟಿದ್ದಾರೆ. ಅಂದರೆ, ನಾಮಪತ್ರ ಸಲ್ಲಿಸುವ ಉಮೇದುವಾರನನ್ನು ಬೆದರಿಸುವುದು, ಅಪಹರಿಸುವುದು, ಮತದಾನಕ್ಕೆ ತೆರಳುವ ಮತದಾರರಿಗೆ ಇಂತಹುದ್ದೇ ಪಕ್ಷದ ಚಿಹ್ನೆಗೆ ಗುಂಡಿ ಒತ್ತಬೇಕೆಂದು ಹೆದರಿಸುವುದು, ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತದಾರರನ್ನು ವಿಘಟಿಸುವುದನ್ನು ಮಾಡುತ್ತಿದ್ದಾರೆ. ಇಂತಹವರಲ್ಲಿ ಕೆಲವರು ‘ಬೂತ್ ಏಜೆಂಟ್ಸ್’ಗಳಾಗಿಯೂ ಇದ್ದಾರೆ. ಇನ್ನೂ ಕೆಲವರು ಉಮೇದುವಾರರ ಹಿಂದೆ ಮುಂದೆ ರಕ್ಷಕರಾಗಿ ನಿಂತು ಮತ ಹಾಕದವರ ಭೂಮಿ, ಮನೆ ಒತ್ತುವರಿ ಮಾಡುತ್ತೇವೆಂದು ಧಮಕಿ ಹಾಕಿಕೊಂಡು ತಿರುಗುತ್ತಿದ್ದಾರೆ. ಇಂತಹ ಠಕ್ಕರಿಗೆ ಪಕ್ಷಕ್ಕಿಂತಲೂ ಹಣ ಮಾಡುವುದೇ ಮುಖ್ಯವಾಗಿರುತ್ತದೆ. ಇಂತಹವರು ಪ್ರತಿ ಹಳ್ಳಿಯಲ್ಲೂ, ನಗರದಲ್ಲೂ, ಗಲ್ಲಿಯಲ್ಲೂ ಸಿಗುತ್ತಾರೆ. ಇವರುಗಳದ್ದೊಂದು ತರಹ ಖಾಸಗಿ ಸೇನೆ ಇದ್ದಂತೆ. ಇವರನ್ನು ಬೂತ್ ಲೂಟಿಕೋರರೆಂದೂ ಕೂಡ ಹೆಸರಿಸಬಹುದು.
ಚುನಾವಣಾ ಆಯೋಗ ತಂದ ‘ಮಾದರಿ ನೀತಿಸಂಹಿತೆ’ಯಂತೂ ದೇಶದ ಚುನಾವಣಾ ಇತಿಹಾಸದಲ್ಲಿ ಹೊಸ ಶಕೆ ಬರೆಸಿತು. ಹಿಂದೆ ಚುನಾವಣೆ ಬಂತೆಂದರೆ ಊರ ತುಂಬ ಫ್ಲೆಕ್ಸ್, ಪಕ್ಷಗಳ ಬಾವುಟ, ಕರಪತ್ರಗಳ ಹಾವಳಿ ಮಿತಿ ಮೀರಿತ್ತು. ಒಂದು ಗ್ರಾಮದಲ್ಲಿ ಒಂದೇ ದಿನ ಹಲವು ಕಡೆ ಬಹಿರಂಗ ಸಭೆ, ಹಣ, ಮದ್ಯ, ಸೀರೆ ಹಂಚಿಕೆಯಂತಹ ಕಾರ್ಯಕ್ರಮಗಳನ್ನು ನೆನಪಿಸಿಕೊಂಡರೆ ತಲೆತಗ್ಗಿಸುವಂತಾಗುತ್ತದೆ. ಉಮೇದುವಾರ ಕೋಟಿ ಖರ್ಚು ಮಾಡಿದ್ದರೂ ಲೆಕ್ಕ ಸಿಗುತ್ತಿರಲಿಲ್ಲ. ಇಂತಹ ಅಕ್ರಮಗಳಿಗೆ ಮಾದರಿ ನೀತಿಸಂಹಿತೆ ಬ್ರೇಕ್ ಹಾಕಿದೆ. ಇದನ್ನು ಮೊಟ್ಟಮೊದಲ ಬಾರಿಗೆ ಕೇರಳದಲ್ಲಿ ಪ್ರಯೋಗಿಸಲಾಯಿತು. ಇದಕ್ಕಾಗಿ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೆ ತಂದಿದ್ದರಿಂದ ಅದೆಷ್ಟೋ ಜನರ ಮಾನ-ಪ್ರಾಣ ಎಲ್ಲವೂ ಉಳಿದಿದೆ. 1995ರ ಕಾಮನ್ ಕಾಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತಿತರರು ಪ್ರಕರಣದಲ್ಲಿ ರಾಜಕೀಯ ಪಕ್ಷದಲ್ಲಿ ಹಣಕಾಸು ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಸುಪ್ರೀಂ ಕೋರ್ಟು ತೀರ್ಪು ನೀಡಿತ್ತು. ಇದರಂತೆ ರಾಜಕೀಯ ಪಕ್ಷಗಳು ಅನುಚ್ಛೇಧ 324 ರಂತೆ ಆದಾಯ ತೆರಿಗೆ ಇಲಾಖೆಗೆ ಮಂಡಿಸಿರುವ ಲೆಕ್ಕಪತ್ರಗಳನ್ನು ಚುನಾವಣಾ ಆಯೋಗಕ್ಕೂ ಸಲ್ಲಿಸಬೇಕು ಹಾಗೆಯೇ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗಳು ಕೂಡ ತಮ್ಮ ಚುನಾವಣಾ ವೆಚ್ಚವನ್ನು ಪರಿಶೀಲನೆಗೆ ಒಪ್ಪಿಸಬೇಕು.
ಇನ್ನೊಂದು ಪ್ರಮುಖ ಸುಧಾರಣೆ ಎಂದರೆ 1978 ರ ಮೊಹಿಂದರ್ ಸಿಂಗ್ ಗಿಲ್ ವರ್ಸಸ್ ದಿ ಚೀಫ್ ಎಲೆಕ್ಷನ್ ಕಮಿಷನರ್ ಪ್ರಕರಣ. ಇದರಂತೆ ಒಮ್ಮೆ ಚುನಾವಣೆ ಘೋಷಣೆಯಾಗಿ ಚುನಾವಣೆ ಪ್ರಕ್ರಿಯೆ ನಡೆಯುವಾಗ ಚುನಾವಣಾ ಪ್ರಕ್ರಿಯೆಗಳನ್ನು ಪ್ರಶ್ನಿಸುವಂತಿಲ್ಲ ಎಂದು ಸುಪ್ರಿಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದರಿಂದ ಚುನಾವಣೆ ಮುಂದೂಡುವ, ತಡೆಯಾಜ್ಞೆ ನೀಡುವ ಪರಿಪಾಠ ಅನವಶ್ಯಕವಾಗಿ, ಉದ್ದೇಶಪೂರ್ವಕವಾಗಿ ಪ್ರಶ್ನಿಸುವವರನ್ನು ನಿಬಂಧಿಸಿದಂತಾಯಿತು. ಈ ಮೂಲಕ ನಿಗದಿತ ಸಮಯದಲ್ಲಿ ಚುನಾವಣೆ ನಡೆಯುವಂತಹ ವಾತಾವರಣ ಸೃಷ್ಟಿಯಾಯಿತು.
ಇದೀಗ ನಡೆದ 524 ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಆಂಧ್ರಪ್ರದೇಶದ ಒಂದು ಕಡೆ ಮಾತ್ರ ವ್ಯತ್ಯಾಸ ಕಂಡು ಬಂದಿದೆ. ಇವಿಎಂ ಕೈಕೊಟ್ಟಿದ್ದರಿಂದ ಸಮಸ್ಯೆ ಆಗಿತ್ತು. ನಂತರ ಸರಿಪಡಿಸಲಾಗಿದೆ. ನ್ಯಾಯಾಲಯದ ಸೂಚನೆಯಂತೆ ಒಂದು ವಿಧಾನಸಭಾ ಕ್ಷೇತ್ರದ ಮತಗಟ್ಟೆಯ ವಿವಿಪ್ಯಾಟ್ ಬದಲಾಗಿ 5 ಮತಗಟ್ಟೆಗಳ ವಿವಿಪ್ಯಾಟ್‍ಗಳನ್ನು ಎಣಿಸಿ ಫಲಿತಾಂಶ ನೀಡಲಾಗಿದೆ. ಅದರಲ್ಲೂ 5 ವಿವಿಪ್ಯಾಟ್ ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ, ಅವುಗಳಲ್ಲಿನ ಚೀಟಿಗಳನ್ನು ವಿದ್ಯನ್ಮಾನ ಮತಯಂತ್ರದ ಜತೆ ತಾಳೆ ಹಾಕಿ ಫಲಿತಾಂಶ ನೀಡಲಾಗಿದೆ. ಹೀಗಾಗಿ ದೇಶದಲ್ಲಿಂದು ಚುನಾವಣಾ ಆಯೋಗ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ ಎನ್ನಬಹುದು ಹಾಗು ಚಲನಶೀಲತೆಯೊಂದಿಗೆ ಸುಧಾರಣೆಗೊಳ್ಳುತ್ತ ಸಾಗಿದೆ ಎಂದು ಕೂಡ ಹೇಳಬಹುದು. 1951 ರ ಜನಪ್ರತಿನಿಧಿ ಕಾಯ್ದೆ ಕಾಲಾನುಕಾಲಕ್ಕೆ ಬದಲಾವಣೆಗಳನ್ನು ಕಂಡಿದ್ದರೂ ಚುನಾವಣಾ ಆಯೋಗ ತನ್ನ ಎಂದಿನ ನಂಬಿಕೆ, ವಿಶ್ವಾಸಾರ್ಹತೆ ಉಳಿಸಿಕೊಂಡಿದೆ.
ಆದರೂ ಹಿರಿಯ ಪತ್ರಕರ್ತ ನಾಗರಾಜ್ ಸಾಮಾಜಿಕ ಮಾಧ್ಯಮದಲ್ಲಿ ಇವಿಎಂ ದುರ್ಬಳಕೆ ಮಾಡಿಕೊಂಡಿರುವ ವಿಡಿಯೋ ತುಣುಕುಗಳನ್ನು ಕಂಡಾಗ ಗಾಬರಿಯಾಗುತ್ತದೆ. ಮತಗಟ್ಟೆ ಕೇಂದ್ರದಲ್ಲಿ, ಮತದಾರ ಒತ್ತಬೇಕಾದ ಗುಂಡಿಯನ್ನು ಚುನಾವಣಾಧಿಕಾರಿ ಕೈ ಹಿಡಿದು ಒತ್ತಿಸುವುದು ಅಸಹ್ಯ ಮೂಡಿಸುತ್ತದೆ. ಮತದಾನದಂತಹ ಪವಿತ್ರ್ಯತೆಯನ್ನು ಹಾಳುಗೆಡವುತ್ತಿರುವ ಸಿಬ್ಬಂದಿಯನ್ನು ನೋಡಿ ಬೇಸರವಾಗುತ್ತಿದೆ. ಇಂತಹವುಗಳಿಂದ ಜನ ಮುಂದೆ ಮತಗಟ್ಟೆಗೆ ಹೋಗುವುದನ್ನೇ ನಿಲ್ಲಿಸಿ ಬಿಡುವ ಅಪಾಯವೂ ಇದೆ. ಇದಾಗಬಾರದು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕು. ದೇಶದ ಸ್ವಾಯತ್ತ ಸಂಸ್ಥೆಗಳು ಪ್ರಜಾತಂತ್ರ ಉಳಿಸುವತ್ತ ಸಾಗಬೇಕು.
***










