ರಾಜಕೀಯ ನಿವೃತ್ತಿ ಘೋಷಿಸಿದ ಎಸ್.ಅಂಗಾರ

63
firstsuddi

ಸುಳ್ಯ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಮತ್ತೋರ್ವ ಹಿರಿಯ ನಾಯಕ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿರುವ ಕಾರಣ ಸುಳ್ಯ ಕ್ಷೇತ್ರದ ಶಾಸಕ, ಮೀನುಗಾರಿಕಾ ಸಚಿವ ಎಸ್‌.ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಟಿಕೆಟ್ ನೀಡದ ಕುರಿತು ನನಗೆ ಅಸಮಾಧಾನ ಇಲ್ಲ. ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದರು.

ಸದ್ಯದ ಬೆಳವಣಿಗೆ ಕಾರ್ಯಕರ್ತರಲ್ಲಿ ಸಂಶಯ ತರಿಸಿದೆ. ಯಾರ ಮೇಲೆ ವಿಶ್ವಾಸ ಇಡಬೇಕು ಎನ್ನುವಂತಾಗಿದೆ. ಲಾಬಿ ಮಾಡಿದವರಿಗೆ ಸೀಟು, ಲಾಬಿ ಮಾಡದವರಿಗೆ ಸೀಟು ಇಲ್ಲ. ನಾನು ಪಕ್ಷ, ಪಕ್ಷದ ನಾಯಕರನ್ನು ದೂರುವುದಿಲ್ಲ. ನನ್ನ ನಡೆಯೇ ನನಗೆ ಮುಳ್ಳಾಯಿತು. ಇಲ್ಲಿಗೆ ರಾಜಕೀಯ ಸಾಕು ಎಂದು ತಮ್ಮ ಬೇಸರ ಹೊರ ಹಾಕಿದರು.

7 ಬಾರಿ ಸುಳ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಗಾರ, ಮೊದಲ ಬಾರಿಗೆ ಸೋಲನ್ನು ಅನುಭವಿಸಿದ್ದರು. ಬಳಿಕ ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಎರಡುವರೆ ವರ್ಷದಿಂದ ಮೀನುಗಾರಿಕೆ ಸಚಿವರಾಗಿದ್ದರು. ಸುಳ್ಯದಲ್ಲಿ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದಿದ್ದರು.