ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಮಹಾರಾಷ್ಟ್ರ, ಕೇರಳದ ಗಡಿಯಲ್ಲಿರುವ ಎಂಟು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇಂದಿನಿಂದಲೇ ಜಾರಿಯಾಗಲಿದೆ.
ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಕೋವಿಡ್ ಟಾಸ್ಕ್ ಫೋರ್ಸ್ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇರಳ ಗಡಿ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಮಂಗಳೂರು, ಮಡಿಕೇರಿ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ ಮತ್ತು ಬೀದರ್ ನಲ್ಲಿ ವಾರಾಂತ್ಯ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ.
ಇನ್ನೂ ರಾಜ್ಯದಲ್ಲಿ ನೈಟ್ ಕರ್ಫ್ಯೂ ಅವಧಿಯನ್ನು ವಿಸ್ತರಿಸಲಾಗಿದೆ. ಇಂದಿನಿಂದ ರಾತ್ರಿ 10 ಗಂಟೆ ಬದಲು ರಾತ್ರಿ 9 ಗಂಟೆಯಿಂದಲೇ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ.
ಇಂದು ಶಾಲಾ-ಕಾಲೇಜು ಆರಂಭ ಕುರಿತು ಚರ್ಚೆ ನಡೆಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, 9,10,11,12ನೇ ತರಗತಿಗಳನ್ನು ಆಗಸ್ಟ್ 23ರಿಂದ ಪ್ರಾರಂಭ ಮಾಡಲು ಅನುಮತಿ ನೀಡಲಾಗಿದೆ. ದಿನ ಬಿಟ್ಟು ದಿನದಂತೆ ಬ್ಯಾಚ್ ವೈಸ್ ಶಾಲೆಗಳನ್ನು ನಡೆಸಲು ಅನುಮತಿಸಲಾಗಿದೆ. ಕೋವಿಡ್ ನೋಡಿ ತಿಂಗಳ ಕೊನೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗಳ ಆರಂಭ ಕುರಿತು ತಜ್ಞರ ತೀರ್ಮಾನದಂತೆ ಅದನ್ನು ಜಾರಿಗೆ ತರಲಾಗುತ್ತದೆ ಎಂದರು.










