ಬೆಂಗಳೂರು : ರಾಜ್ಯದಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಜಾರಿ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಸದಸ್ಯ ಹರೀಶ್ ಕುಮಾರ್ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ನಮ್ಮ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳ ದೈನಂದಿನ ಬೇಡಿಕೆಗೆ ತಕ್ಕಂತೆ ಕಲ್ಲಿದ್ದಲು ಸರಬರಾಜಾಗುತ್ತಿದೆ. ಸದ್ಯಕ್ಕೆ ನಮಗೆ ಕಲ್ಲಿದ್ದಲು ಕೊರತೆ ಎದುರಾಗಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ, ಅಂತಹ ಸ್ಥಿತಿ ಎದುರಾಗಿಲ್ಲ, ಪ್ರಾರಂಭದಲ್ಲಿ ಸ್ವಲ್ಪ ಕಲ್ಲಿದ್ದಲಿನ ಸಮಸ್ಯೆ ಆಗಿತ್ತು. ಆದರೆ ಕೂಡಲೇ ಕೇಂದ್ರ ಸಚಿವರ ಭೇಟಿಯಾಗಿ ರಾಜ್ಯದ ಪಾಲಿನ ಕಲ್ಲಿದ್ದಲು ಪಡೆಯಲು ಕ್ರಮವಹಿಸುವ ಕೆಲಸ ಆಗಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಯಾಗುತ್ತಿದೆ. ಎಲ್ಲಿಯಾದರೂ ರೈತರಿಗೆ ವಿದ್ಯುತ್ ಪೂರೈಕೆ ಸಮಸ್ಯೆ ಆಗಿದ್ದಲ್ಲಿ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.










