ರಾಜ್ಯದಲ್ಲಿ ಹೆಚ್ಚಾದ ಡ್ರಗ್ ಮಾಫಿಯಾ-ಮೂಡಿಗೆರೆ ಪೊಲೀಸ್ ವತಿಯಿಂದ ಹೋಂಸ್ಟೇ, ಲಾಡ್ಜ್, ಮೆಡಿಕಲ್ ಶಾಪ್ ಮಾಲೀಕರ ಸಭೆ…

239

ಮೂಡಿಗೆರೆ : ರಾಜ್ಯದಲ್ಲಿ ಡ್ರಗ್ ಮಾಫಿಯಾ ಹೆಚ್ಚಾಗುತ್ತಿರುವ ಹಿನ್ನೆಲೆ, ಪೊಲೀಸ್ ಇಲಾಖೆ ವತಿಯಿಂದ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ಮೆಡಿಕಲ್ ಶಾಪ್ ಮಾಲೀಕರ ಸಭೆಯನ್ನು ಪಟ್ಟಣದ ಭಂಟರ ಭವನದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೃತ್ತ ನಿರೀಕ್ಷಕ ಜಗನ್ನಾಥ್ ಅವರು, ಹೋಂ ಸ್ಟೇ, ರೆಸಾರ್ಟ್ ಲಾಡ್ಜ್ ಗೆ ಬರುವ ಎಲ್ಲಾ ಗ್ರಾಹಕರ ಬಳಿ ಯಾವುದಾದರು ಒಂದು ಐಡೆಂಟಿಟಿ ಕಾರ್ಡ್ ಪಡೆದುಕೊಂಡು ರೂಂ ನೀಡಬೇಕು. ಹಾಗೂ ಯಾವುದೇ ತರಹದ ಅನೈತಿಕ ಚಟುವಟಿಕೆ ನಡೆಯಕೂಡದು. ನೊಂದಾಣಿ ಮಾಡದ ಹೋಂ ಸ್ಟೇಗಳು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಠಾಣಾಧಿಕಾರಿ ರವಿ ಅವರು ಮಾತನಾಡಿ ವೈದ್ಯರ ಸೂಚನೆಯಿಲ್ಲದೆ ನಗರದ ಮೆಡಿಕಲ್ ಶಾಪ್‍ಗಳಲ್ಲಿ ಯಾರಿಗೂ ಯಾವುದೇ ತರಹದ ಔಷಧಿಯನ್ನು ನೀಡಬಾರದು. ಔಷಧಿ ನೀಡಿದಲ್ಲಿ ಮೆಡಿಕಲ್ ಶಾಪ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರೆಸಾರ್ಟ್, ಹೋಂ ಸ್ಟೇ, ಲಾಡ್ಜ್ ಗಳಲ್ಲಿ ಬರುವ ಎಲ್ಲಾ ಗ್ರಾಹಕರ ಬಗ್ಗೆ ಗಮನ ಹರಿಸಬೇಕು. ಗ್ರಾಹಕರ ಐಡೆಂಟಿಟಿ ಕಾರ್ಡ್ ಪಡೆದುಕೊಂಡು ರಿಜಿಸ್ಟಾರ್ ಮಾಡಿಕೊಳ್ಳಬೇಕು. ತಿಂಗಳಿಗೊಮ್ಮೆ ಗ್ರಾಹಕರ ರಿಜಿಸ್ಟಾರ್ ನಕಲನ್ನು ಠಾಣೆಗೆ ನೀಡಬೇಕು. ಪ್ರವಾಸಿ ಸ್ಥಳಗಳಿಗೆ ಹೋಗುವ ಗ್ರಾಹಕರಿಗೆ ಒಬ್ಬ ಮಾರ್ಗದರ್ಶಿಯನ್ನು ಕಳುಹಿಸಿಕೊಡಬೇಕು. ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಗ್ರಾಹಕರಿಗೆ ತಿಳಿಸಬೇಕು. ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಿಕೊಳ್ಳಬೇಕು. ಹಾಗೂ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ನಿಗಾ ವಹಿಸಬೇಕು. ಯಾರ ಬಗ್ಗೆಯಾದರೂ ಅನುಮಾನ ಕಂಡುಬಂದಲ್ಲಿ ಠಾಣೆಗೆ ತಿಳಿಸಬೇಕು ಎಂದರು. ತಾಲ್ಲೂಕಿನ ನೂರಕ್ಕೂ ಅಧಿಕ ಹೋಂ ಸ್ಟೇ ಮಾಲೀಕರು ಹಾಗೂ ಎಎಸ್‍ಐ ಚಂದ್ರು, ಸಿಬ್ಬಂದಿಗಳಾದ ಗಿರೀಶ್, ಮನು, ಸುರೇಶ್, ದಯಾನಂದ ಸೇರಿದಂತೆ ಇತರ ಸಿಬ್ಬಂದಿ ಇದ್ದರು.