ಚಿಕ್ಕಮಗಳೂರು: ರಾಜ್ಯದ ಜನರಿಗೆ ಉಚಿತ ಅಕ್ಕಿ ಕೊಡಲು ಆಗದಿದ್ದರೆ ಅಧಿಕಾರದಿಂದ ತೊಲಗಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಯೋಗ ದಿನಾಚರಣೆಯ ಬಳಿಕ ಮಾತನಾಡಿದ ಅವರು, ಕೇಂದ್ರದ ಅಕ್ಕಿ ಸೇರಿ ರಾಜ್ಯದ ಜನರಿಗೆ ಒಟ್ಟು 15 ಕೆಜಿ ಅಕ್ಕಿ ಕೊಡಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮರ್ಯಾದೆ ಇಲ್ಲದ ಬೇಜವಾಬ್ದಾರಿ ಮುಖ್ಯಮಂತ್ರಿ, ಚುನಾವಣೆಗೂ ಮುನ್ನ ಗ್ಯಾರಂಟಿಗಳನ್ನು ಘೋಷಿಸುವಾಗ ನಿಮ್ಮ ತಲೆಯಲ್ಲಿ ಏನಿತ್ತು? ಮೆದುಳು ಇರಲಿಲ್ಲವಾ, ಸಗಣಿ ತುಂಬಿತ್ತಾ ಎಂದು ಹರಿಹಾಯ್ದರು.
ಒಂದೇ ತಿಂಗಳಿಗೆ ರಾಜ್ಯದಲ್ಲಿ ಅರಾಜಕತೆ ತುಂಬಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕಾಂಗ್ರೆಸ್ಸಿಗರಿಗೆ ಮಾನ-ಮರ್ಯಾದೆ ಇಲ್ಲ. ವೋಟು ಹಾಕಿಸಿಕೊಂಡು ಜನರಿಗೆ ಮೋಸ ಮಾಡಿದ್ದೀರಾ. ಸಿದ್ದರಾಮಯ್ಯನವರೇ ನಿಮ್ಮ ಬೇಜವಾಬ್ದಾರಿ ಹೇಳಿಕೆಗಳನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.
ಮಹಿಳೆಯರ ಬಸ್ಸಿಗೆ ಪಾಸ್ ಕೇಳುತ್ತಿದ್ದಾರೆ, ಸರ್ಟಿಫಿಕೇಟ್ ಕೇಳ್ತಿದ್ದಾರೆ. ನಾನು ಮಹಿಳೆ ಅನ್ನೋದಕ್ಕೆ ನನಗೆ ಸರ್ಟಿಫಿಕೇಟ್ ಬೇಕಿಲ್ಲ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಅಕ್ಕಿ ಕೊಡೋದಕ್ಕೆ ಕೇಂದ್ರ ಸರ್ಕಾರ ಕೊಡುತ್ತಿಲ್ಲ ಎನ್ನುತ್ತಿದ್ದಾರೆ. ಈಗ ಯಾಕೆ ನೀವು ಮೋದಿ ಕಡೆ ಬೆರಳು ತೋರಿಸುತ್ತೀರಾ? ಯಾವುದೇ ಮುಂದಾಲೋಚನೆ ಇಲ್ಲದೆ ಘೋಷಿಸಿ ಇವತ್ತು ಮೋದಿ ಕಡೆ ತೋರಿಸುತ್ತಿದ್ದೀರಾ. ಇವಕ್ಕೆಲ್ಲಾ ಹಣ ಎಲ್ಲಿಂದ ತರುತ್ತೀರಾ ಎಂದು ನಾವು ಅಂದೇ ಕೇಳಿದ್ದೆವು. ಅಂದು ಸುಮ್ಮನಿದ್ದು ಇಂದು ಅಕ್ಕಿ, ದುಡ್ಡು, ವಿದ್ಯುತ್ ಎಲ್ಲದಕ್ಕೂ ಮೋದಿ ಕಡೆ ತೋರಿಸುತ್ತಿದ್ದೀರಾ ಎಂದು ಕಿಡಿಕಾರಿದರು.
ಎಲ್ಲದಕ್ಕೂ ಮೋದಿಯನ್ನು ತೋರಿಸುವುದಾದರೆ, ಅಂದು ನೀವು ಗ್ಯಾರಂಟಿ ಕಾರ್ಡ್ ಏಕೆ ಹಂಚಿದ್ರಿ? ಯಾರಿಗೆ ಮೋಸ ಮಾಡಿ, ಯಾರ ಮೂಗಿಗೆ ತುಪ್ಪ ಸವರಲು ಹಂಚಿದ್ರಿ? ಬಫರ್ ಸ್ಟಾಕ್ ಇರೋದು ನೆರೆ, ಬರ, ಯುದ್ಧದ ಸಂದರ್ಭದಲ್ಲಿ ಬಳಕೆಗೆಂದು, ಬೇರೆ ರಾಜ್ಯ ಹಾಗೂ ನಮ್ಮ ರಾಜ್ಯದ ರೈತರ ಅಕ್ಕಿ ಖರೀದಿಸಿ ಕೊಡಿ ಎಂದು ಹೇಳಿದರು.










