ರಾಜ್ಯಪಾಲರ ಭಾಷಣಕ್ಕೆ ಸ್ಟಾಲಿನ್ ಆಕ್ಷೇಪ – ವಿಧಾನಸಭೆ ಕಲಾಪದಿಂದ ಹೊರನಡೆದ ಆರ್‌ಎನ್ ರವಿ.

38
firstsuddi

ಚೆನ್ನೈ : ತಮಿಳುನಾಡು ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಇಂದು ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ಸದನವನ್ನು ಉದ್ದೇಶಿಸಿ ಮಾತನಾಡಿದರು. ಇದರಲ್ಲಿ ಅನೇಕ ವಿಷಯಗಳನ್ನು ಅವರು ಓದಿರಲಿಲ್ಲ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ರಾಜ್ಯಪಾಲರ ಭಾಷಣದ ಮೇಲೆ ನಿರ್ಣಯ ತೆಗೆದುಕೊಂಡರು.

ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ಕಡತಕ್ಕೆ ತೆಗೆದುಕೊಳ್ಳಬೇಕು, ರಾಜ್ಯಪಾಲರು ಸೇರಿಸಿರುವ ಉಳಿದ ಭಾಷಣವನ್ನು ತೆಗೆದುಹಾಕಬೇಕು ಎಂದು ಸ್ಟಾಲಿನ್ ಹೇಳಿದರು. ಇದರಿಂದ ಕೋಪಗೊಂಡ ಗವರ್ನರ್ ಆರ್ ಎನ್ ರವಿ ಸದನದಿಂದ ಹೊರ ನಡೆದರು.

ಜಾತ್ಯತೀತತೆ ಸೇರಿದಂತೆ ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖವನ್ನು ರಾಜ್ಯ ಸರ್ಕಾರ ಭಾಷಣದಲ್ಲಿ ಸಿದ್ಧಪಡಿಸಿತ್ತು. ಆದರೆ ಭಾಷಣದ ಆ ಭಾಗಗಳನ್ನು ಅವರು ಬಿಟ್ಟುಬಿಟ್ಟಿದ್ದಾರೆ. ಆಡಳಿತಾರೂಢ ಡಿಎಂಕೆ ಪ್ರಚಾರ ಮಾಡುವ ದ್ರಾವಿಡ ಮಾದರಿಯ ಉಲ್ಲೇಖವನ್ನೂ ಅವರು ಓದಿಲ್ಲ. ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಎಂಕೆ ಸ್ಟಾಲಿನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ನಡುವೆ ರಾಜ್ಯಪಾಲ ಆರ್‌ಎನ್ ರವಿ ವಿರುದ್ಧ ಕಿಡಿ ಕಾರಿದ ಡಿಎಂಕೆ ಶಾಸಕರು, ಇಲ್ಲಿ ನೀವು ಬಿಜೆಪಿ ಹಾಗೂ ಆರ್ ಎಸ್ ಎಸ್ ಗಳಂತಹ ಸಿದ್ಧಾಂತಗಳನ್ನು ಹೇರಬೇಡಿ. ಇದು ನಾಗಾಲ್ಯಾಂಡ್ ಅಲ್ಲ. ಇದು ನಮ್ಮ ಹೆಮ್ಮೆಯ ತಮಿಳುನಾಡು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ತಮಿಳುನಾಡಿನ ರಾಜ್ಯಪಾಲ ಆರ್‌ಎನ್ ರವಿ ನಡುವೆ ಹಲವು ವಿಚಾರಗಳಲ್ಲಿ ಜಗಳ ನಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ದ್ರಾವಿಡ ರಾಜಕೀಯವನ್ನು ‘ಪ್ರತಿಗಾಮಿ ರಾಜಕೀಯ’ ಎಂದು ಕರೆದಿದ್ದ ರಾಜ್ಯಪಾಲ ರವಿ ಅವರ ಹೇಳಿಕೆಗೆ ಡಿಎಂಕೆ ಬಲವಾದ ವಿರೋಧ ವ್ಯಕ್ತಪಡಿಸಿತ್ತು. ತಮಿಳುನಾಡು ರಾಜ್ಯದ ಹೆಸರನ್ನು ‘ತಮಿಳಗಂ’ ಎಂದು ಬದಲಾಯಿಸಲು ರಾಜ್ಯಪಾಲರು ಸೂಚಿಸಿದ್ದರು.