ನವದೆಹಲಿ : ರಾಜ್ಯಸಭೆಯ 57 ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದ್ದು, ಇದರಲ್ಲಿ 11 ರಾಜ್ಯದ 41 ಸ್ಥಾನಗಳಿಗೆ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಜೂನ್ 10ರಂದು ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಹರಿಯಾಣದಲ್ಲಿ ಚುನಾವಣೆ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ-11, ತಮಿಳುನಾಡು- 6, ಬಿಹಾರ -5, ಆಂಧ್ರಪ್ರದೇಶ-4, ಮಧ್ಯಪ್ರದೇಶ, ಒಡಿಶಾದಲ್ಲಿ ತಲಾ ಮೂವರು, ಛತ್ತೀಸ್ಗಢ, ಪಂಜಾಬ್, ತೆಲಂಗಾಣ ಮತ್ತು ಜಾರ್ಖಂಡ್ ನಲ್ಲಿ ತಲಾ ಇಬ್ಬರು ಹಾಗೂ ಉತ್ತರಾಖಂಡದಲ್ಲಿ ತಲಾ ಓರ್ವ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಉಳಿದ 16 ಸ್ಥಾನಗಳಿಗಾಗಿ ಜೂನ್ 10ರಂದು ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಆಡಳಿತರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಚುನಾವಣೆ ಅನಿವಾರ್ಯವಾಗಿದೆ. ಬಿಜೆಪಿ ಮೂವರು, ಕಾಂಗ್ರೆಸ್ ಇಬ್ಬರು, ಜೆಡಿಎಸ್ ಒಬ್ಬರನ್ನು ಕಣಕ್ಕಿಳಿಸಿದೆ.
ತಮಿಳುನಾಡಿನಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಸೇರಿ ಎಲ್ಲಾ ಆರು ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಿ. ಚಿದಂಬರಂ (ಕಾಂಗ್ರೆಸ್), ಥಾಂಜೈ ಎಸ್. ಕಲ್ಯಾಣಸುಂದರಂ, ಆರ್. ಗಿರಿರಾಜನ್ ಮತ್ತು ಕೆ.ಆರ್.ಎನ್. ರಾಜೇಶ್ ಕುಮಾರ್ (ಡಿಎಂಕೆ), ಸಿ. ವೆ. ಷಣ್ಮುಗಂ ಮತ್ತು ಆರ್. ಧರ್ಮಾರ್ (ಎಐಎಡಿಎಂಕೆ) ಅವರು ತಮಿಳುನಾಡಿನಿಂದ ಆಯ್ಕೆ ಆಗಿದ್ದಾರೆ. ಪಂಜಾಬ್ ನಿಂದ ಆಮ್ ಆದ್ಮಿ ಪಕ್ಷದ (ಎಎಪಿ) ಬಲ್ಬೀರ್ ಸಿಂಗ್ ಸೀಚೆವಾಲ್ ಮತ್ತು ವಿಕ್ರಂಜಿತ್ ಸಿಂಗ್ ಸಹ್ನೆ ಅವರು ಅವಿರೋಧವಾಗಿ ಆಯ್ಕೆ ಆದರು.
ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ನ ನಾಲ್ವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ವಿ. ವಿಜಯಸಾಯಿ ರೆಡ್ಡಿ, ಬೀಡಾ ಮುಸ್ತಾನ್ ರಾವ್, ಆರ್. ಕೃಷ್ಣಯ್ಯ ಮತ್ತು ನಿರಂಜನ್ ರೆಡ್ಡಿ ಅವರು ಆಯ್ಕೆಯಾಗಿದ್ದಾರೆ. ಜಾರ್ಖಂಡ್ ನಿಂದ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಅಭ್ಯರ್ಥಿ ಮಹುವಾ ಮಾಜಿ ಮತ್ತು ಬಿಜೆಪಿ ಅಭ್ಯರ್ಥಿ ಆದಿತ್ಯ ಸಾಹು ಅವರು ಆಯ್ಕೆ ಆದರು.
ಛತ್ತೀಸಗಡದ ಆಡಳಿತಾರೂಢ ಕಾಂಗ್ರೆಸ್ ನ ಅಭ್ಯರ್ಥಿಗಳಾದ ರಾಜೀವ್ ಶುಕ್ಲಾ ಮತ್ತು ರಂಜೀತ್ ರಾಜನ್ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಮಧ್ಯಪ್ರದೇಶದಿಂದ ಕಾಂಗ್ರೆಸ್ ಅಭ್ಯರ್ಥಿ, ಹಿರಿಯ ವಕೀಲ ವಿವೇಕ್ ತಂಖಾ ಮತ್ತು ಬಿಜೆಪಿಯ ಅಭ್ಯರ್ಥಿಗಳಾದ ಸುಮಿತ್ರಾ ವಾಲ್ಮೀಕಿ, ಕವಿತಾ ಪಾಟೀದಾರ್ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.










