ರಾಜ್ಯ ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಲು ನಿರ್ಧರಿಸಿದ್ದೇವೆ : ಸಿದ್ದರಾಮಯ್ಯ.

113
Firstsuddi

ಬೆಂಗಳೂರು : ರಾಜ್ಯ ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಲು ನಿರ್ಧರಿಸಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಹೇಳಿದ್ದಾರೆ.

ಬಜೆಟ್ ಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರು ಸಿಎಂ ಯಡಿಯೂರಪ್ಪ ಹಾಗು ಸಚಿವ ನಿರಾಣಿ ಅವರು ಕೆಐಎಡಿಬಿ ಹಗರಣ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಜ.27 ರಂದು ಸುಪ್ರೀಂ ಕೋರ್ಟ್ ನಲ್ಲಿ ಹೈಕೋರ್ಟ್ ಆದೇಶಕ್ಕೆ ಸ್ಟೇ ಕೇಳಿ ಅಪೀಲು ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಇದನ್ನು ನಿರಾಕರಿಸಿತು. ಈ ವೇಳೆ ಪೊಲೀಸರು ಇವರನ್ನು ಬಂಧಿಸಬಹುದಿತ್ತು. ಆದರೆ, ಮುಖ್ಯಮಂತ್ರಿಗಳನ್ನು ಬಂಧಿಸಲು ಸಾಧ್ಯವೇ ಎಂದು ಸುಪ್ರೀಂ ನ್ಯಾಯಮೂರ್ತಿ ವ್ಯಂಗ್ಯವಾಡಿದ್ದರು. ಹೀಗಾಗಿ ಸಿಎಂ ಬಿಎಸ್ ವೈ ಮತ್ತು ಸಚಿವ ನಿರಾಣಿ ಇಬ್ಬರೂ ಸದ್ಯ ನಿರೀಕ್ಷಣಾ ಜಾಮೀನಿನ ಮೇಲಿದ್ದಾರೆ ಎಂದರು.

ರಮೇಶ್ ಜಾರಕಿಹೊಳಿ ಸಿ.ಡಿ. ಸ್ಫೋಟದ ಬೆಳವಣಿಗೆ ನಂತರ ಸಚಿವರಾದ ಹೆಬ್ಬಾರ್, ಬಿ.ಸಿ.ಪಾಟೀಲ್, ಸುಧಾಕರ್, ಭೈರತಿ ಬಸವರಾಜ್, ನಾರಾಯಣ ಗೌಡ, ಸೋಮಶೇಖರ್ ಸೇರಿ 6 ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಇವರು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದು ಮಾಧ್ಯಮಗಳ ಸ್ವಾತಂತ್ರ್ಯ ಹರಣ. ಕರ್ಮಕಾಂಡ ಸಿಡಿಗಳನ್ನು ಟೆಲಿಕಾಸ್ಟ್ ಮಾಡಬೇಡಿ ಎಂಬುದೇ ಅವರ ಉದ್ದೇಶ ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಮಾತನಾಡಿದರು.

ಈ ಸರ್ಕಾರ ಅನೈತಿಕತೆಯ ಮೂಟೆ ಹೊತ್ತುಕೊಂಡಿದೆ. ಯಡಿಯೂರಪ್ಪ ಸೇರಿ ಅನೇಕ ಸಚಿವರಿಗೆ ನೈತಿಕತೆಯಿಲ್ಲ. ಸರ್ಕಾರದಲ್ಲಿ ಸಿಎಂ ಹಾಗೂ ಸಚಿವ ಸ್ಥಾನಗಳಲ್ಲಿ ಮುಂದುವರೆಯಲು ನೈತಿಕತೆಯಿಲ್ಲ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಿ ಮುಂದುವರಿಯಲು ಹಾಗೂ ಬಜೆಟ್ ಮಂಡಿಸಲು ನೈತಿಕತೆ ಇಲ್ಲ. ಎಲ್ಲರೂ ರಾಜೀನಾಮೆ ನೀಡಬೇಕು. ನಾವು ಬಜೆಟ್ ವೇಳೆ ಸಭಾತ್ಯಾಗ ಮಾಡುತ್ತೇವೆ ಎಂದರು.