ವಿಜಯಪುರ: ರಾಜ್ಯ ಸಾವಿನ ಮನೆಯಾಗಿದ್ದರೂ ಸರ್ಕಾರ ಸಂಬಂಧವಿಲ್ಲದ ರೀತಿಯಲ್ಲಿದೆ. ಜೊತೆಗೆ ಡಿನ್ನರ್ ಪಾರ್ಟಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾವಿನ ಮನೆಯಾಗಿದೆ. ಬಾಣಂತಿಯರ ಸಾವು, ಹಸುಗೂಸುಗಳ ಸಾವಿಗೆ ಕಾರಣ ಗೊತ್ತಾಗುತ್ತಿಲ್ಲ. ರೈತರ ಆತ್ಮಹತ್ಯೆಗಳಾಗುತ್ತಿವೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಳುವ ಸರ್ಕಾರಕ್ಕೆ ಇದೆಲ್ಲ ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ರೋಮ್ ದೇಶ ಹೊತ್ತಿ ಉರಿಯುವಾಗ ದೊರೆ ಪಿಟೀಲು ನುಡಿಸುತ್ತಿದ್ದನಂತೆ ಎಂಬ ಗಾದೆ ಮಾತಿನಂತೆ ರಾಜ್ಯ ಸಾವಿನ ಮನೆಯಾಗಿದ್ದರೂ ಸರ್ಕಾರ ಸಂಬಂಧವಿಲ್ಲದ ರೀತಿಯಲ್ಲಿದೆ. ಇವರು ಡಿನ್ನರ್ ಪಾರ್ಟಿ ನಡೆಸಿದ್ದಾರೆ. ಕರುಣೆ ಇದ್ದರೆ ಬಾಣಂತಿಯರ ಸಾವಿಗೆ ಕಾರಣ ಕಂಡುಕೊಳ್ಳಲಿ. ಸಾವಿನ ಸರಣಿ ಇನ್ನೂ ನಿಂತಿಲ್ಲ. ಸಾವುಗಳಿಗೆ ಆಸ್ಪತ್ರೆ, ಔಷಧ, ವೈದ್ಯರು ಯಾರು ಕಾರಣ ಎಂಬುವುದನ್ನು ಕಂಡು ಹಿಡಿಯಲಿ ಎಂದು ಹೇಳಿದರು.










