ಮುಂಬೈ : ಕೊರೊನಾ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇದೆ. ಹೀಗಾಗಿ ನಟ ಪ್ರಭಾಸ್ ಹಾಗೂ ನಟಿ ಪೂಜಾ ಹೆಗ್ಡೆ ಅಭಿನಯದ ‘ರಾಧೆ-ಶ್ಯಾಮ್’ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಈ ಸಿನಿಮಾ ಸಂಕ್ರಾಂತಿ ನಿಮಿತ್ತ ಜನವರಿ 14ರಂದು ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡುವ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.
ಈ ಬಗ್ಗೆ ಚಿತ್ರದ ನಿರ್ಮಾಣ ಸಂಸ್ಥೆಯಾದ ಯುವಿ ಕ್ರಿಯೇಷನ್ಸ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ನಾವು ಕಳೆದ ಕೆಲವು ದಿನಗಳಿಂದ ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಆದರೆ, ಓಮಿಕ್ರಾನ್ ರೂಪಾಂತರ ಪ್ರಕರಣಗಳ ಹೆಚ್ಚಳದ ಕಾರಣದಿಂದ ಈ ಚಿತ್ರವನ್ನು ಪರದೆ ಮೇಲೆ ನೋಡಲು ಇನ್ನೂ ಕಾಯಬೇಕಾಗಿದೆ. ನಾವು ಶೀಘ್ರದಲ್ಲೇ ನಿಮ್ಮನ್ನು ಚಿತ್ರಮಂದಿರಗಳಲ್ಲಿ ನೋಡುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.
ಈ ಚಿತ್ರಕ್ಕೆ ರಾಧಾಕೃಷ್ಣ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ‘ರಾಧೆ ಶ್ಯಾಮ್’ ತೆರೆಕಾಣಲಿದೆ.










