ವೀಕೆಂಡ್ ಕರ್ಫ್ಯೂ ವೇಳೆ ನಮ್ಮ ಮೆಟ್ರೋ ಓಡಾಟ, ಎಂದಿನಂತೆ ಸಂಚರಿಸಲಿವೆ ಕೆಎಸ್‌ಆರ್‌ಟಿಸಿ ಬಸ್.

73
firstsuddi

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ತನ್ನ ಆಟ ಶುರುಮಾಡಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದರಂತೆ ಮುಂದಿನ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಈ ವೇಳೆ ಕೆಎಸ್ ಆರ್ ಟಿಸಿ ಬಸ್ ಗಳು ಎಂದಿನಂತೆ ಸಂಚರಿಸಲಿವೆ ಜೊತೆಗೆ ಮೆಟ್ರೋ ಓಡಾಟ ಎಂದಿನಂತೆ ಇರಲಿದೆ.ಆದರೆ ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಲಿದೆ.

ಕೊವಿಡ್ ಗೆ ಸರ್ಕಾರ ಹೇರಿರುವ ನಿಯಮ ಪಾಲನೆ ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯ ಹಾಗೂ ಹೊರ ರಾಜ್ಯದ ನಡುವೆ ಬಸ್ ಸಂಚಾರ ಇರಲಿದೆ. ಗೋವಾ, ಕೇರಳ, ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ಮಾಹಿತಿ ನೀಡಿದ್ದಾರೆ.

ವೀಕೆಂಡ್ ಕರ್ಫ್ಯೂ ವೇಳೆ ನಮ್ಮ ಮೆಟ್ರೋ ಸಂಚಾರಕ್ಕೆ ಅಡ್ಡಿಯಿಲ್ಲ. ಶನಿವಾರ ಮತ್ತು ಭಾನುವಾರ ಎಂದಿನಂತೆ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ. ನಮ್ಮ ಮೆಟ್ರೋ ಹಸಿರು, ನೇರಳೆ ಮಾರ್ಗದಲ್ಲಿ ಯಾವುದೇ ಬದಲಾವಣೆಯಿಲ್ಲ. ನಮ್ಮ ಮೆಟ್ರೋದಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ ಇರಲಿದೆ. ಮೆಟ್ರೋ ರೈಲಿನಲ್ಲಿ ಸದ್ಯ 1800-1900 ಜನ ಪ್ರಯಾಣಿಸುತ್ತಿದ್ದಾರೆ. ಕೊವಿಡ್ ಹೆಚ್ಚಳ ಹಿನ್ನೆಲೆ 800-900 ಜನ ಪ್ರಯಾಣಕ್ಕೆ ಅವಕಾಶ ನೀಡಲಿದ್ದೇವೆ. ಸದ್ಯ 10ರಿಂದ 15 ನಿಮಿಷಕ್ಕೊಂದು ಮೆಟ್ರೋ ರೈಲು ಕಾರ್ಯಾಚರಣೆಯಾಗುತ್ತಿದೆ. ಕರ್ಪ್ಯೂ ವೇಳೆ ಅರ್ಧ ಗಂಟೆಗೊಂದು ಮೆಟ್ರೋ ಓಡಾಡಲಿದೆ ಎಂದು ಬಿಎಂಆರ್ ಸಿಎಲ್ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.

ಇನ್ನೂ ವೀಕೆಂಡ್ ಕರ್ಪ್ಯೂ ವೇಳೆ ಶನಿವಾರ, ಭಾನುವಾರ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಓಡಾಟ ಇರುವುದಿಲ್ಲ. ಜೊತೆಗೆ ರಾತ್ರಿ ನಿಷೇಧಾಜ್ಞೆ ವೇಳೆಯೂ ಬಸ್ ಸಂಚರಿಸುವುದಿಲ್ಲ. ಅಗತ್ಯ ಸೇವೆಯಡಿ ಮಾತ್ರ ಬಸ್ ಓಡಾಟ ಇರಲಿದ್ದು, ಸಾರ್ವಜನಿಕ ಸಂಚಾರ ಸೇವೆ ಇರುವುದಿಲ್ಲ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದ್ದಾರೆ.