ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ಆರೋಗ್ಯ ಇಲಾಖೆಯಿಂದ ದಂಪತಿಗೆ ಕಾಂಡೋಮ್ ವಿತರಣೆ…

81
firstsuddi

ರಾಯಚೂರು : ಜಿಲ್ಲೆಯ ಮಾನ್ವಿಯ ಕೋಳಿ ಕ್ಯಾಂಪ್ ನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ರಾಜ್ಯದ ಮೊದಲ ಪ್ರಕರಣವಾಗಿರುವುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು ಕೋಳಿ ಕ್ಯಾಂಪ್ ಸುತ್ತಮುತ್ತಲ ಗ್ರಾಮಗಳಲ್ಲಿ ಸೊಳ್ಳೆಗಳ ನಿಯಂತ್ರಣ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಕೋಳಿ ಕ್ಯಾಂಪ್ ಸುತ್ತಮುತ್ತಲ 5 ಕಿ.ಮೀ ವ್ಯಾಪ್ತಿಯ ಗ್ರಾಮಗಳಲ್ಲಿ ಲಾರ್ವಾ ಸರ್ವೆ, ಗರ್ಭಿಣಿಯರ ರಕ್ತ ಪರೀಕ್ಷೆ, ಜ್ವರದ ಪ್ರಕರಣ ಪತ್ತೆ ಕಾರ್ಯ ನಡೆದಿದೆ. ಗರ್ಭಿಣಿಯರಲ್ಲಿ ಝಿಕಾ ವೈರಸ್ ಪತ್ತೆಯಾದರೆ ಹುಟ್ಟುವ ಮಗುವಿನ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಗರ್ಭಿಣಿಯರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಜೊತೆಗೆ ಮಗುವನ್ನು ಬಯಸುವವರು ಇನ್ನೂ 6 ತಿಂಗಳು ಮುಂದೂಡಿ ಎಂದು ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ದಂಪತಿಗೆ ಕಾಂಡೋಮ್ ವಿತರಣೆ ಮಾಡುತ್ತಿದ್ದಾರೆ.

ವೈರಸ್ ಪತ್ತೆಗೆ ಕಾರಣ ತಿಳಿಯುವ ಹಿನ್ನೆಲೆ ಕೇಂದ್ರ ತಜ್ಞರ ತಂಡ, ವೈದ್ಯರು, ಅಧಿಕಾರಿಗಳು ನಿರಂತರ ಸಭೆ ನಡೆಸುತ್ತಿದ್ದಾರೆ. ಗ್ರಾಮಗಳಲ್ಲಿ ಸಂಗ್ರಹಿಸಿರುವ ರಕ್ತ ಮಾದರಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.