ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಆರೋಪಿ ದರ್ಶನ್ ಜಾಮೀನು ಅರ್ಜಿ ಇಂದು ವಿಚಾರಣೆ.

36

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ಆರೋಪಿ ದರ್ಶನ್ ಗೆ ಜಾಮೀನು ನೀಡದ ಕಾರಣ ಜಾಮೀನು ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿರುವ ಆರೋಪಿ ದರ್ಶನ್ ರವರ ಜಾಮೀನು ಅರ್ಜಿ ಇಂದು ಹೈಕೋರ್ಟ್‍ನಲ್ಲಿ ವಿಚಾರಣೆಯಾಗಲಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ನ್ಯಾಯಪೀಠದಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ರವರು ಅಕ್ಟೋಬರ್ 15 ರಂದು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು. ಅಕ್ಟೋಬರ್ 22 ರಂದು ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು ಆ ಸಮಯದಲ್ಲಿ ದರ್ಶನ್ ಆರೋಗ್ಯದ ಕುರಿತು ಮಾಹಿತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಅಲ್ಲದೇ, ಅರ್ಜಿಯ ಕುರಿತಂತೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ನ್ಯಾಯಾಧೀಶರಾದ ಪ್ರಸನ್ನ ಕುಮಾರ್ ಅವರಿಗೆ ಸೂಚನೆ ನೀಡಿ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ದರ್ಶಿಗಳ ಹೇಳಿಕೆಯನ್ನು ತಡವಾಗಿ ದಾಖಲು ಮಾಡಿಕೊಳ್ಳಲಾಗಿದೆ. ಶವಪರೀಕ್ಷೆಯನ್ನು ಸಹ ವಿಳಂಬವಾಗಿ ಮಾಡಲಾಗಿದೆ. ಪ್ರತ್ಯಕ್ಷ ಸಾಕ್ಷಿದಾರರನ್ನು ತನಿಖಾಧಿಕಾರಿಗಳೇ ಸೃಷ್ಟಿ ಮಾಡಿದ್ದಾರೆ. ಪ್ರಕರಣದಲ್ಲಿ ಇತರೆ ಆರೋಪಿಗಳೊಂದಿಗೆ ತಾನು ಯಾವುದೇ ಒಳಸಂಚು ರೂಪಿಸಿಲ್ಲ. ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಹೆಚ್ಚಿನ ತನಿಖೆ ಅಗತ್ಯ ಇಲ್ಲವಾಗಿದೆ. ಹಾಗೆಯೇ, ತಾನು ಬೆನ್ನು ನೋವಿನಿಂದ ಬಳಲುತ್ತಿದ್ದು, ಅಗತ್ಯ ಚಿಕಿತ್ಸೆ ಪಡೆಯಲು ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿಯಲ್ಲಿ ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ಕೋರಿದ್ದರು.