ರೈತರ ವಿರೋಧ ಕಟ್ಟಿಕೊಳ್ಳಬೇಡಿ, ಹಿಂಸಾಚಾರಕ್ಕೂ ಹಿಂದೇಟು ಹಾಕುವವರಲ್ಲ : ಸತ್ಯಪಾಲ್ ಮಲ್ಲಿಕ್ ಎಚ್ಚರಿಕೆ…

78
firstsuddi

ಜೋಧಪುರ : ಯಾವುದೇ ಕಾರಣಕ್ಕೂ ರೈತರ ವಿರೋಧ ಕಟ್ಟಿಕೊಳ್ಳಬೇಡಿ, ಅವರು ತಮಗೆ ಬೇಕಾಗಿದ್ದನ್ನು ಪಡೆಯಲು ಯಾವಾಗ ಬೇಕಾದರೂ ಹಿಂಸಾಚಾರ ಮಾರ್ಗ ಅನುಸರಿಸಬಹುದು ಎಂದು ಕೇಂದ್ರಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಎಚ್ಚರಿಕೆ ನೀಡಿದ್ದಾರೆ.

ರಾಜಸ್ಥಾನದ ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರೈತರ ವಿರೋಧ ಕಟ್ಟಿಕೊಳ್ಳಬಾರದು ಎಂದು ನಾನು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತೇನೆ. ಏಕೆಂದರೆ ರೈತರು ತುಂಬ ಅಪಾಯಕಾರಿ ಜನರು. ಅವರಿಗೇನು ಬೇಕೋ ಅದನ್ನು ಪಡೆದೇ ತೀರುತ್ತಾರೆ. ಮಾತುಕತೆಯ ಮೂಲಕವಾದರೂ ಸರಿ, ಹೋರಾಟದ ಮುಖಾಂತರವಾದರೂ ಸರಿ ಅವರಿಗೇನು ಬೇಕೋ ಅದನ್ನು ಪಡೆಯುತ್ತಾರೆ. ಅಗತ್ಯ ಕಂಡರೆ ರೈತರು ಹಿಂಸಾಚಾರ ನಡೆಸಲೂ ಹಿಂದೇಟು ಹಾಕುವವರಲ್ಲ ಎಂದು ಹೇಳಿದ್ದಾರೆ.

ಸಾಗುವಳಿದಾರರಿಗೆ ಮೂಗುದಾರ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ತಮ್ಮ ಬೇಡಿಕೆಗಳನ್ನು ಹೇಗೆ ಈಡೇರಿಸಿಕೊಳ್ಳಬೇಕು ಎಂಬುದು ಅವರಿಗೆ ಗೊತ್ತು. ಸರ್ಕಾರಗಳು ಅವರಿಗೆ ಯಾವುದೇ ಭರವಸೆ ನೀಡಿದ್ದರೂ, ಅದನ್ನು ಆದಷ್ಟು ಬೇಗ ನೆರವೇರಿಸಬೇಕು. ನನಗೆ ಕೇಂದ್ರ ಸರ್ಕಾರದ ಜತೆ ಶತ್ರುತ್ವ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.