ಚಿಕ್ಕಮಗಳೂರು : ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡರ ಮನೆಯ ಮೇಲೆ ನಡೆದ ದಾಳಿಯ ನೈಜತೆಯನ್ನು ಮರೆ ಮಾಚಿ ದುಗ್ಗಪ್ಪಗೌಡರು ಹಾಗೂ ಅವರ ಕುಟುಂಬದವರ ವಿರುದ್ಧ ಮೊಕದ್ದಮೆ ದಾಖಲಿಸಿರುವುದು ಹೋರಾಟ ಮತ್ತು ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರವಾಗಿದೆ ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಆರೋಪಿಸಿದರು.
ಕಿಡಿಗೇಡಿಗಳ ದಾಳಿಯಿಂದ ಹಾನಿಗೊಳಗಾದ ಮೂಡಿಗೆರೆಯ ದುಗ್ಗಪ್ಪಗೌಡರ ನಿವಾಸಕ್ಕೆ ಭಾನುವಾರ ಬಹುಜನ ಸಮಾಜ ಪಕ್ಷದ ಮುಖಂಡರ ನಿಯೋಗದೊಂದಿಗೆ ತೆರಳಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜಾಗದ ವಿವಾದದ ಹಿನ್ನೆಲೆಯಲ್ಲಿ ಕೆಲವರು ಇತ್ತೀಚೆಗೆ ದುಗ್ಗಪ್ಪಗೌಡರ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ಜೆಸಿಬಿ ಮೂಲಕ ಮನೆ ಮತ್ತು ಆವರಣವನ್ನು ಹಾನಿ ಮಾಡಿದ್ದಾರೆ, ಏಕಾಏಕಿ ನಡೆದ ದಾಳಿಯಿಂದ ಭೀತಿಗೊಳಗಾದ ದುಗ್ಗಪ್ಪಗೌಡರು ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ವಿವರಿಸಿದರು.
ಆದರೆ ದುಗ್ಗಪ್ಪಗೌಡರ ವಿರೋಧಿಗಳು ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪ್ರಕರಣವನ್ನು ತಿರುಚಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ, ಪೊಲೀಸರೂ ಸಹ ಕೂಲಂಕುಷವಾಗಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸುವ ಬದಲು ದಾಳಿಗೊಳಗಾದವರ ವಿರುದ್ಧವೇ ಕ್ರಮ ಕೈಗೊಂಡಿದ್ದಾರೆ ಎಂದು ದೂರಿದರು.
ಪೋಲೀಸರು ನಿಪ್ಷಕ್ಷಪಾತವಾಗಿ ಕಾರ್ಯನಿರ್ವಹಿಸಿದ್ದರೆ ದುಗ್ಗಪ್ಪಗೌಡರ ಮನೆಯ ಮೇಲೆ ದಾಳಿ ಮಾಡಿದವರ ಮೇಲೂ ಪ್ರಕರಣ ದಾಖಲಿಸಬೇಕಿತ್ತು ಅದನ್ನು ಬಿಟ್ಟು ದಾಳಿಗೊಳಗಾದವರ ಮೇಲೆ ಮಾತ್ರ ಮೊಕದ್ದಮೆ ದಾಖಲಿಸಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೋಲೀಸ್ ಇಲಾಖೆ ದುಗ್ಗಪ್ಪಗೌಡರ ವಿರುದ್ಧ ದಾಖಲಿಸಿರುವ ಸುಳ್ಳು ಮೊಕದ್ದಮೆ ಕೂಡಲೇ ಕೈಬಿಡಬೇಕು, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್, ಜಿಲ್ಲಾ ಸಂಯೋಜಕ ಯು.ಬಿ.ಮಂಜಯ್ಯ, ತಾಲ್ಲೂಕು ಅಧ್ಯಕ್ಷ ಲೋಕವಳ್ಳಿ ರಮೇಶ್, ವಿನೀತ್ ನಿಯೋಗದಲ್ಲಿದ್ದರು.










