ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿದ್ದಾಗ ನಡೆದಿದ್ದ ಬಟ್ಟೆ ಬ್ಯಾಗ್ ಹಗರಣ : ತನಿಖೆಗೆ ಆದೇಶಿಸಿದ ಸರ್ಕಾರ…

60
firstsuddi

ಮೈಸೂರು : ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನಡೆದಿದ್ದ ಬಟ್ಟೆ ಬ್ಯಾಗ್ ಖರೀದಿ ಹಗರಣದ ತನಿಖೆಗೆ ಕರ್ನಾಟಕ ಸರ್ಕಾರ ಆದೇಶ ನೀಡಿದೆ.

ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅವರು ‘ಬಟ್ಟೆ ಬ್ಯಾಗ್ ಖರೀದಿ’ಯಲ್ಲಿ ಹಗರಣ ಮಾಡಿದ್ದಾರೆ ಎಂಬ ವಿಷಯವನ್ನ ಶಾಸಕ ಸಾ ರಾ ಮಹೇಶ್ ಬಯಲಿಗೆಳೆದಿದ್ದರು. ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆಯ ಪೂರ್ವಾನುಮತಿಯಿಲ್ಲದೇ ದುಬಾರಿ ಬೆಲೆಗೆ ಬಟ್ಟೆ ಬ್ಯಾಗ್ ಗಳನ್ನು ಖರೀದಿಸಲಾಗಿದೆ ಎಂದು ಸಾ.ರಾ ಮಹೇಶ್ ದೂರಿದ್ದರು. ಚಿಲ್ಲರೆ ಮಾರುಕಟ್ಟೆಯಲ್ಲಿ 10 ರಿಂದ 13 ರೂ.ಗೆ ಸಿಗುವ ಬ್ಯಾಗ್ ಗಳನ್ನ, ರೋಹಿಣಿ ಸಿಂಧೂರಿ ಅವರು 52 ರೂ. ಕೊಟ್ಟು ಖರೀದಿಸಿದ್ದಾರೆ. ಇದರಿಂದ ಸಾರ್ವಜನಿಕರ ಹಣ ವ್ಯರ್ಥವಾಗಿದೆ. ಡಿಸಿ ರೋಹಿಣಿ ಸಿಂಧೂರಿ 14.71 ಲಕ್ಷ ಬಟ್ಟೆ ಬ್ಯಾಗ್ ಗಳನ್ನು 14 ಕೋಟಿ ಮೊತ್ತಕ್ಕೆ ಖರೀದಿಸಿದ್ದರು. ಕೈಮಗ್ಗ ನಿಗಮದ ಬದಲು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡುವ ಮೂಲಕ 6.8 ಕೋಟಿ ಅವ್ಯವಹಾರ ನಡೆದಿದೆ ಎಂದು ಸಾ ರಾ ಮಹೇಶ್ ಆರೋಪಿಸಿದ್ದರು.

ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಸಿಂಧೂರಿ, ಶಾಸಕರ ಆರೋಪ ಆಧಾರ ರಹಿತವಾದದ್ದು. ಬ್ಯಾಗ್ ಪೂರೈಕೆಗೆ ನಿಯಮಾನುಸಾರ ಅಭಿವೃದ್ಧಿ ನಿಗಮಕ್ಕೆ ಗುತ್ತಿಗೆ ನೀಡಲಾಗಿತ್ತು. ನಿಗಮವೇ ದರವನ್ನು ನಿಗದಿ ಮಾಡಿದ್ದು, ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಪ್ರಾದೇಶಿಕ ಜವಳಿ ಪ್ರಯೋಗಾಲಯವು ಬ್ಯಾಗ್ ಗಳ ಗುಣಮಟ್ಟ ದೃಢೀಕರಿಸಿತ್ತು. ಜಿಲ್ಲಾಧಿಕಾರಿಯಾಗಿದ್ದಾಗ ನಾನು ಒಂದು ಪೈಸೆಯನ್ನು ನಿಗಮಕ್ಕೆ ನೀಡಿಲ್ಲ. ಈಗ 9.59 ಲಕ್ಷ ಮಾತ್ರ ನಿಗಮಕ್ಕೆ ಪಾವತಿಯಾಗಿದೆ ಎಂದಿದ್ದರು. ಇದೀಗ ಕರ್ನಾಟಕ ಸರ್ಕಾರ ತನಿಖೆಗೆ ಆದೇಶಿಸಿದೆ.