ಲಕ್ಷದ್ವೀಪದಲ್ಲಿ ಮೋದಿ: ಸ್ನಾರ್ಕ್ಲಿಂಗ್ ಮಾಡುತ್ತಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್…

40
firstsuddi

ಕವರಟ್ಟಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದಾಗ ತೆಗೆಸಿದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ಸದ್ದು ಮಾಡುತ್ತಿದೆ.

ಎರಡು ದಿನಗಳ ಕಾಲ ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪ ಪ್ರವಾಸದಲ್ಲಿದ್ದ ಮೋದಿ ಅವರು ಹಲವು ಮನಮೋಹಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲಕ್ಷದ್ವೀಪದಲ್ಲಿ ಸ್ನಾರ್ಕ್ಲಿಂಗ್ ಮಾಡುತ್ತಿರುವ ಫೋಟೋಗಳು ಹಾಗೂ ಕಡಲತೀರಗಳಲ್ಲಿ ಮಾರ್ನಿಂಗ್ ವಾಕ್ ಮಾಡುತ್ತಾ ಅನುಭವಿಸಿದ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರವಾಸವನ್ನು ಇಷ್ಟಪಡುವ ಜನರು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಮೋದಿ, ಪ್ರಾಚೀನ ಕಡಲತೀರಗಳ ಉದ್ದಕ್ಕೂ ಆ ಮುಂಜಾನೆ ನಡಿಗೆಗಳು ಹೆಚ್ಚು ಆನಂದದ ಕ್ಷಣಗಳಾಗಿದ್ದವು. ರಮಣೀಯ ಸೌಂದರ್ಯದ ಜೊತೆಗೆ ಲಕ್ಷದ್ವೀಪದ ಪ್ರಶಾಂತತೆಯೂ ಮನಮೋಹಕವಾಗಿದೆ. ಇಲ್ಲಿನ ಪ್ರಶಾಂತ ವಾತಾವರಣವು 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಇನ್ನಷ್ಟು ಶ್ರಮಿಸುವುದು ಹೇಗೆ ಎಂಬುದನ್ನು ಪ್ರತಿಬಿಂಬಿಸಲು ಅವಕಾಶ ನೀಡಿತು ಎಂದು ಬರೆದುಕೊಂಡಿದ್ದಾರೆ.

ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿಯವರು ತಂತ್ರಜ್ಞಾನ, ಇಂಧನ, ಜಲಸಂಪನ್ಮೂಲ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 1,150 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.