ಲವರ್ ಕೈಕೊಟ್ಟಿದ್ದಕ್ಕೆ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿಕೊಂಡು ಪ್ರಾಣ ಕಳೆದುಕೊಂಡ ಪ್ರಿಯಕರ…

32
firstsuddi

ಬೆಂಗಳೂರು: ಪ್ರಿಯತಮೆ ಬಿಟ್ಟು ಹೋಗಿದ್ದಕ್ಕೆ ನೊಂದ ಪ್ರಿಯಕರನೊಬ್ಬ ಕತ್ತರಿಯಿಂದ ತನ್ನ ಹೊಟ್ಟೆಗೆ ಚುಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಗರದ ನಂದಿನಿ ಲೇಔಟ್ ನಲ್ಲಿ ನಡೆದಿದೆ.

ದಾವಣಗೆರೆ ಮೂಲದ ಚೇತನ್ (21) ಮೃತ ದುರ್ದೈವಿ. ಎರಡು ವರ್ಷದಿಂದ ಚೇತನ್, ಜನನಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರು ಕಾಲೇಜಿನಲ್ಲಿ ಓದುವ ವೇಳೆ ಪರಿಚಯವಾಗಿ ಲವ್ ಆಗಿತ್ತು. ಈ ವಿಷಯ ಹುಡುಗಿ ಕಡೆಯವರಿಗೆ ಗೊತ್ತಾಗಿತ್ತು. ಈ ಹಿನ್ನಲೆ ಹುಡುಗಿಯ ಚಿಕ್ಕಪ್ಪ ಚೇತನ್ ಜೊತೆ ಮದುವೆಗೆ ಒಪ್ಪಿರಲಿಲ್ಲ.

ಇದಾದ ಬಳಿಕವೂ ಹಲವು ಬಾರಿ ಇಬ್ಬರು ಭೇಟಿಯಾಗಿ ಓಡಾಡಿದ್ದರು. ಕೆಲ ದಿನಗಳ ಹಿಂದೆ ನಮ್ಮ ಚಿಕ್ಕಪ್ಪ ಮದುವೆಗೆ ಒಪ್ಪುತ್ತಿಲ್ಲ ಎಂದು ಜನನಿ ಹೇಳಿದ್ದಳು. ನೀನು ಬೇರೆ ಹುಡುಗಿ ಮದುವೆಯಾಗು ಎಂದು ಚೇತನ್ ಗೆ ಹೇಳಿದ್ದಳು. ತಾನು ಇಷ್ಟಪಟ್ಟ ಹುಡುಗಿ ದೂರವಾಗಿದಕ್ಕೆ ಮನನೊಂದಿದ್ದ ಚೇತನ್, ನಿನ್ನೆ ರಾತ್ರಿ 11 ಗಂಟೆಗೆ ಹುಡುಗಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ. ಈ ವೇಳೆ ಜನನಿ ಸಿಗದಿದ್ರೆ, ಸಾಯುವುದಾಗಿ ಹೇಳಿದ್ದಾನೆ. ನಂತರ ಕತ್ತರಿಯಿಂದ ಹೊಟ್ಟೆಗೆ ಚೇತನ್ ತಿವಿದುಕೊಂಡಿದ್ದು, ಬಳಿಕ ಚೇತನ್ ತಂದೆ ತಾಯಿಗೆ ಜನನಿ ಕಡೆಯವರು ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಪೋಷಕರು ಬಂದು ನೋಡುವಾಗ ಚೇತನ್ ಆಟೋದಲ್ಲಿ ಬಿದ್ದಿದ್ದ. ಬಳಿಕ ನಾಗರಬಾವಿ ಖಾಸಗಿ ಆಸ್ಪತ್ರೆಗೆ ಚೇತನ್​ನನ್ನು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಮೃತನಾಗಿದ್ದಾನೆ. ಈ ಹಿನ್ನಲೆ ಚೇತನ್ ಕುಟುಂಬಸ್ಥರು, ಹುಡುಗಿ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ಭೇಟಿ ನೀಡಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಸಿಕೊಂಡಿದ್ದಾರೆ.