ನವದೆಹಲಿ : ದೇಶದಲ್ಲಿ ನಾಲ್ಕನೇ ಅಲೆ ಭೀತಿ ಎದುರಾಗಿರುವ ಹಿನ್ನಲೆ ತೆಗೆದುಕೊಳ್ಳಬೇಕಾದ ಕಟ್ಟು ನಿಟ್ಟಿನ ಕ್ರಮಗಳ ಕುರಿತು ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಿದರು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ರಾಜ್ಯಗಳಲ್ಲಿ ಲಸಿಕೆ ಅಭಿಯಾನ ಚುರುಕು ಮಾಡಿ. ಬೂಸ್ಟರ್ ಡೋಸ್ ಬಗ್ಗೆ ರಾಜ್ಯಗಳು ಗಮನ ಕೊಡಬೇಕು. ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದರು. ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ರಾಜ್ಯಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಿ. ಸೋಂಕು ಕಡಿಮೆ ಇದೆ ಅಂತ ಟೆಸ್ಟಿಂಗ್ ಕಡಿಮೆ ಮಾಡಬೇಡಿ ಎಂದು ತಿಳಿಸಿದರು.
ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಔಷಧಿಗಳು, ಆಕ್ಸಿಜನ್ ವ್ಯವಸ್ಥೆ ಸಿದ್ಧ ಮಾಡಿಕೊಳ್ಳಿ. 4ನೇ ಅಲೆ ಅಪಾಯಕಾರಿಯಲ್ಲದೇ ಇದ್ದರೂ ಎಚ್ಚರಿಕೆ ಇರಲಿ. ರೂಪಾಂತರ ತಳಿ ಬಗ್ಗೆ ನಿರ್ಲಕ್ಷ್ಯ ಮಾಡೋದು ಬೇಡ. ಬೇರೆ ದೇಶಗಳಲ್ಲಿ 4ನೇ ಅಲೆ ಬಂದಿದ್ದರೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾದ ವರದಿ ಆಗಿಲ್ಲ. ಆದರೂ ರಾಜ್ಯಗಳು ಮೈಮರೆಯುವುದು ಬೇಡ. ಆಸ್ಪತ್ರೆಗಳು, ಬೆಡ್ ಗಳು, ಔಷಧಿಗಳ ಕೊರತೆ ಆಗದಂತೆ ಎಚ್ಚರಿಕೆವಹಿಸಿ ಎಂದು ಹೇಳಿದರು.
3ಟಿ ಸೂತ್ರ ಮತ್ತೆ ಪ್ರಸ್ತಾಪ ಮಾಡಿದ ಪ್ರಧಾನಿ, ಪ್ರತಿ ರಾಜ್ಯಗಳು 3ಟಿ ಸೂತ್ರ ಅಳವಡಿಸಿಕೊಳ್ಳಬೇಕು. ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್ ನಿಯಮ ಅನುಷ್ಠಾನ ಮಾಡಿ. ವೇಗವಾಗಿ ಟೆಸ್ಟಿಂಗ್ ಮಾಡಿ, ಸೋಂಕಿತರನ್ನು ಕೂಡಲೇ ಟ್ರೇಸ್ ಮಾಡಿ. ಸೋಂಕಿತರನ್ನು ಪತ್ತೆ ಹಚ್ಚಿ ಟ್ರೀಟ್ಮೆಂಟ್ ಕೊಡಿ ಎಂದು ಸಲಹೆ ನೀಡಿದರು.
ವ್ಯಾಕ್ಸಿನ್ ದೊಡ್ಡ ಕವಚವಾಗಿದೆ. ವ್ಯಾಕ್ಸಿನ್ ಪಡೆಯುವುದರಿಂದ ಅಪಾಯದಿಂದ ರಕ್ಷಣೆ ಸಿಗಲಿದೆ. ಶಾಲಾ ಮಕ್ಕಳಲ್ಲೂ ಸೋಂಕು ಕಂಡು ಬಂದಿತ್ತು. ಈಗ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ. ಶೀಘ್ರದಲ್ಲಿ ಹೆಚ್ಚು ಮಕ್ಕಳಿಗೆ ವ್ಯಾಕ್ಸಿನ್ ನೀಡುವುದು ನಮ್ಮ ಆದ್ಯತೆ. ಶಾಲೆಗಳಲ್ಲಿ ವಿಶೇಷ ವ್ಯಾಕ್ಸಿನ್ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.
ಇಂಧನದ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆ ಕೋವಿಡ್ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ಮೋದಿ ರಾಜ್ಯಗಳನ್ನು ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಂತಹ ರಾಜ್ಯಗಳು ಇಂಧನದ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿಲ್ಲ ಎಂದಿರುವ ಅವರು ಕೇಂದ್ರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಕೆಲವು ರಾಜ್ಯಗಳು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಿಲ್ಲ. ಇದರಿಂದ ಜನರಿಗೆ ಅನ್ಯಾಯವಾಗಿದೆ ಎಂದಿದ್ದಾರೆ.










